ಮೈಸೂರು: ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡ ಖಂಡಿಸಿ ಎಡ ಪಕ್ಷಗಳಿಂದ ಮಂಗಳವಾರ ನಗರದಲ್ಲಿ ರಾಷ್ಟ್ರೀಯ ಸೌಹಾರ್ದತಾ ದಿನವನ್ನು ಆಚರಿಸಲಾಯಿತು.
ಪುರಭವನದ ಎದುರು ಜಮಾವಣೆಗೊಂಡ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್-ಲೆನಿನಿಸ್ಟ್), ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯ (ಕಮ್ಯುನಿಸ್ಟ್) ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪ್ಯಾಲೆಸ್ಟೈನ್‌ಗೆ ಬೆಂಬಲ ಸೂಚಿಸಿದರು.
2 ವರ್ಷಗಳಿಂದ ಸತತವಾಗಿ ಇಸ್ರೇಲ್‌ನ ಬಾಂಬ್ ದಾಳಿಯಿಂದ 55 ಸಾವಿರಕ್ಕೂ ಹೆಚ್ಚಿನ ಪ್ಯಾಲೆಸ್ಟೈನಿಯರು ಹತ್ಯೆಯಾಗಿದ್ದು, ಲಕ್ಷಾಂತರ ಜನರು ಗಾಯಾಳುಗಳಾಗಿದ್ದಾರೆ.
ಅಗತ್ಯ ಮೂಲ ಸಂರಚನೆ, ಆಸ್ಪತ್ರೆಗಳು, ಶಾಲೆಗಳು, ನಿರಾಶ್ರಿತ ವಸತಿ ಕೇಂದ್ರಗಳನ್ನು ಗುರಿಯಿಟ್ಟು ದಾಳಿ ಮಾಡಲಾಗುತ್ತಿದೆ. ಇದರಿಂದಾಗಿ ಪ್ಯಾಲೆಸ್ಟೈನಿಯರು ಹಿಂದೆಂದೂ ಕಂಡರಿಯದ ಮಾನವ ದುರಂತ ಅನುಭವಿಸುತ್ತಿದ್ದಾರೆ. ಇದು ಜನಾಂಗೀಯ ಹತ್ಯೆಯಲ್ಲದೆ ಬೇರೇನೂ ಅಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಗಾಜಾಗೆ ಆಹಾರ, ನೀರು, ಇಂಧನ, ನೆರವು ಮತ್ತು ಇತರ ಎಲ್ಲ್ಲ ಅಗತ್ಯ ವಸ್ತುಗಳ ಪೂರೈಕೆ ಕಡಿತಗೊಳಿಸಿದೆ. ಗಾಜಾವನ್ನು ಕತ್ತುಹಿಸುಕಿ ಹಸಿವಿನಿಂದ ಸಾಯುವಂತೆ ಮಾಡಲು ಇಸ್ರೇಲ್ ಉದ್ದೇಶಿಸಿದೆ. ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಶೇ.60ರಷ್ಟು ಮಹಿಳೆಯರು ಮತ್ತು ಮಕ್ಕಳು ಆಗಿದ್ದಾರೆ.
ಇಸ್ರೇಲಿ ಪ್ರಭುತ್ವದ ನರಮೇಧದ ಗುಣವನ್ನು ತೆರೆದಿಟ್ಟಿದೆ. ಇದನ್ನೆಲ್ಲ ಗಮನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್ ಪ್ರಧಾನಿ, ಇತರ ನಾಯಕರ ವಿರುದ್ಧ ಬಂಧನದ ವಾರಂಟ್ ಹೊರಡಿಸಿದೆ ಎಂದು ಹೇಳಿದರು.
ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ಟೈನಿ ಪ್ರದೇಶವನ್ನು ಆಕ್ರಮಿಸಲು ಮತ್ತು ಯೆಹೂದಿ ವಸತಿ ಸ್ಥಾಪಿಸಲು ಜಿಯೋನಿಸ್ಟ್ ಆಕ್ರಮಣಕಾರರಿಗೆ ಇಸ್ರೇಲ್ ಪ್ರೇರಣೆ ನೀಡುತ್ತಿದೆ. ಪ್ಯಾಲೆಸ್ಟೈನಿಯರನ್ನು ತಮ್ಮ ತಾಯಿ ನೆಲದಿಂದ ಹೊರಗೆ ಓಡಿಸಿ, ಆ ದೇಶವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗುತ್ತಿದೆ ಎಂದು ದೂರಿದರು.
ಅಮೆರಿಕ ಮತ್ತು ಪಶ್ಚಿಮ ಯೂರೋಪಿನ ಅದರ ಮಿತ್ರ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಇಸ್ರೇಲ್‌ಗೆ ಬೆಂಬಲಿಸುತ್ತಿವೆ. ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿವೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದಕ್ಕೆ ಬೆಂಬಲ ನೀಡುತ್ತಿವೆ. ಗಾಜಾ ಪ್ರದೇಶವನ್ನು ಪ್ರವಾಸೋದ್ಯಮದ ಸ್ವರ್ಗವಾಗಿ ಮಾರ್ಪಡಿಸಲು ಅಲ್ಲಿ ವಾಸಿಸುತ್ತಿರುವ ಎಲ್ಲ ಪ್ಯಾಲೆಸ್ಟೈನಿಯರನ್ನು ಓಡಿಸಬೇಕೆಂಬ ಟ್ರಂಪ್‌ನ ಘೋಷಣೆಯು ಇಸ್ರೇಲಿನ ಹಿತಾಸಕ್ತಿಗೆ ಪೂರಕವಾಗಿದೆ ಎಂದರು.
ಬಿಜೆಪಿ ಕೇಂದ್ರ ಸರ್ಕಾರವು ಸಹ ಪ್ಯಾಲೆಸ್ಟೈನ್ ಕುರಿತು ಭಾರತದ ದೀರ್ಘಕಾಲೀನ ಅಧಿಕೃತ ನಿಲುವಿಗೆ ಎಳ್ಳು ನೀರು ಬಿಟ್ಟಿದೆ. ಭಾರತ ಸರ್ಕಾರವು ತನ್ನ ಚಾರಿತ್ರಿಕವಾದ ಪ್ಯಾಲೆಸ್ಟೈನ್ ಜನರ ಜತೆಗೆ ನಿರ್ಣಾಯಕವಾಗಿ ನಿಲ್ಲುವ ಧೋರಣೆ ಕೈಬಿಟ್ಟು ಇಸ್ರೇಲ್ ಅನ್ನು ಓಲೈಸುವ ಕೆಲಸ ಮಾಡುತ್ತಿದೆ.
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ನಿಲುವಿಗೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಭಾರತ ಸರ್ಕಾರದ ನಿಲುವು ಬದಲಾಗಿರುವುದು ಅವಮಾನಕರ ವಿಷಯ. ಇದರ ಪರಿಣಾಮವಾಗಿ ಇಸ್ರೇಲ್ ಅನ್ನು ಖಂಡಿಸುವ ಮತ್ತು ಯುದ್ಧ ವಿರಾಮಕ್ಕೆ ಒತ್ತಾಯಿಸುವ ವಿಶ್ವಸಂಸ್ಥೆಯ ನಿರ್ಣಯಗಳಿಗೆ ವಿರೋಧ ಅಥವಾ ತಟಸ್ಥ ನಿಲುವನ್ನು ಪ್ರದರ್ಶಿಸಿದೆ.
ಇಂತಹ ನಿಲುವುಗಳು ಅಭಿವೃದ್ಧಿಶೀಲ ದೇಶಗಳ ಪೈಕಿ ಭಾರತದ ಘನತೆಯನ್ನು ಕುಗ್ಗಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗಾಜಾ ಮೇಲಿನ ದಾಳಿಯನ್ನು ಇಸ್ರೇಲ್ ನಿಲ್ಲಿಸಬೇಕು. ಅದು ನಡೆಸಿರುವ ಜನಾಂಗೀಯ ದ್ವೇಷ ಮತ್ತು ಯುದ್ಧ ಅಪರಾಧ ಖಂಡಿಸಿ ಇಸ್ರೇಲನ್ನು ಜನಾಂಗೀಯ ದ್ವೇಷದ ಪ್ರಭುತ್ವ ಎಂದು ಘೋಷಿಸಿ ಕ್ರಮ ಕೈಗೊಳ್ಳಬೇಕು. ಪ್ಯಾಲೆಸ್ಟೈನಿ ಜನತೆ ನಡೆಸುತ್ತಿರುವ ನ್ಯಾಯಯುತ ಹೋರಾಟವನ್ನು ಬೆಂಬಲಿಸಬೇಕು. ಭಾರತ ಸರ್ಕಾರವು ಇಸ್ರೇಲ್‌ನೊಂದಿಗೆ ಮಿಲಿಟರಿ, ಭದ್ರತಾ ಸಹಕಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಜಗದೀಶ್ ಸೂರ್ಯ, ಎಚ್.ಬಿ.ರಾಮಕೃಷ್ಣ, ಚೌಡಳ್ಳಿ ಜವರಯ್ಯ, ರವಿ, ಡಾ.ರತಿರಾವ್, ಚಂದ್ರಶೇಖರ್ ಮೇಟಿ, ಉಮಾದೇವಿ, ಪಿ.ಎಸ್.ಸಂಧ್ಯಾ, ಲಾ.ಜಗನ್ನಾಥ್ ಇನ್ನಿತರರಿದ್ದರು.
*7
ಗಾಜಾದಲ್ಲಿ ಇಸ್ರೇಲಿನ ಮಾನವ ಹತ್ಯಾಕಾಂಡ ಖಂಡಿಸಿ ಎಡ ಪಕ್ಷಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ರಾಷ್ಟ್ರೀಯ ಸೌಹಾರ್ದತಾ ದಿನವನ್ನು ಆಚರಿಸಲಾಯಿತು. ಜಗದೀಶ್ ಸೂರ್ಯ, ಎಚ್.ಬಿ.ರಾಮಕೃಷ್ಣ, ಚೌಡಳ್ಳಿ ಜವರಯ್ಯ, ರವಿ, ಡಾ.ರತಿರಾವ್, ಚಂದ್ರಶೇಖರ್ ಮೇಟಿ, ಉಮಾದೇವಿ, ಪಿ.ಎಸ್.ಸಂಧ್ಯಾ, ಲಾ.ಜಗನ್ನಾಥ್ ಇನ್ನಿತರರಿದ್ದರು.