ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ. 
ಜಿಲ್ಲೆ

ಇಷ್ಟಾರ್ಥ ಈಡೇರಿಸುವ ಶಕ್ತಿದೈವ

ಬೆಟ್ಟದಪುರ: ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ಆಂಜನೇಯ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿದೈವನಾಗಿದ್ದಾನೆ.

ಎರಡು ತಲೆಮಾರುಗಳಿಂದ ಗ್ರಾಮದಲ್ಲಿ ನೆಲೆಸಿರುವ ಶೀ ಆಂಜನೇಯ(ವೀರಾಂಜನೇಯ) ಸ್ವಾಮಿ ಬಗ್ಗೆ ಭಕ್ತರಿಗೆ ಅಂದಿನಿಂದಲೂ ಅಪಾರ ನಂಬಿಕೆ. ಗ್ರಾಮದ ಪ್ರಮುಖ ದೇವರ ಗುಡಿ ಇದಾಗಿದ್ದು, ಚಿಕ್ಕನೇರಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಕಾಯುವ ಮಾರುತಿಯಾಗಿದ್ದಾನೆ.

ತಾಲೂಕಿನ ಚಿಕ್ಕನೇರಳೆ, ದೊಡ್ಡನೇರಳೆ, ನೀಲವಾಡಿ, ವಡ್ಡರಹೊಸಹಳ್ಳಿ, ಹಾರನಹಳ್ಳಿ, ಹಸುವಿನಕಾವಲು, ತರೀಕಲ್ಲು, ಮೈಸೂರು, ಮಡಿಕೇರಿ, ಹಾಸನ ಜಿಲ್ಲೆಯಿಂದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ಹಾಗೂ ಬುಧವಾರ ಮತ್ತು ಶನಿವಾರದಂದು ಇಲ್ಲಿ ವಿಶೇಷ ಪೂಜೆ ನೆರವೇರಲಿದೆ.

ಕುಟುಂಬ ಅಥವಾ ಮನೆಯಲ್ಲಿರುವ ಸಮಸ್ಯೆ ಪರಿಹಾರಕ್ಕೆ, ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದಲು, ವ್ಯವಹಾರದಲ್ಲಿ ಲಾಭ ಕಾಣಲು, ಗ್ರಾಮಗಳ ಕಲ್ಯಾಣ ಸೇರಿದಂತೆ ಇತರ ಇಷ್ಟಾರ್ಥಗಳನ್ನು ಈಡೇರಿಸುವಂತೆ ಮಾರುತಿಗೆ ಪೂಜೆ ಸಲ್ಲಿಸಿ ಮಂಡಿಯೂರಿ ಬೇಡಿಕೆ ಇಟ್ಟು ಹರಕೆ ಹೊತ್ತುಕೊಳ್ಳುತ್ತಾರೆ. ಎಲ್ಲವೂ ಅಂದುಕೊಂಡಂತೆ ನೆರವೇರಿದರೆ ಪೂಜೆ ಅಥವಾ ಮುಡಿ ಕೊಡುವ ರೂಪದಲ್ಲಿ ಹರಕೆ ತೀರಿಸುತ್ತಾರೆ.

ಐಕ್ಯತೆ ಸಾರಿದ್ದ ಹನುಮ ಜಯಂತಿ: 2022ರ ಡಿಸೆಂಬರ್‌ನಲ್ಲಿ ಇಲ್ಲಿನ ವೀರಾಂಜನೇಯ ಸೇವಾ ಸಮಿತಿ ಹಾಗೂ ಗ್ರಾಮಸ್ಥರು ಜಂಟಿಯಾಗಿ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಿದರು. ಸುಮಾರು 15 ಅಡಿ ಎತ್ತರದ ಹನುಮ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ಮಾಡಿದ್ದರು. ಮಳೆಯನ್ನೂ ಲೆಕ್ಕಿಸದೆ ಯುವಸಮೂಹ, ಮಹಿಳೆಯರು ಮಾರುತಿ ಭಜನೆ ಮಾಡಿದ್ದರು.
ಇದರೊಂದಿಗೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಹೋಮ ಮತ್ತು ವಿವಿಧ ಧಾರ್ಮಿಕ ಪೂಜೆ ನೆರವೇರಿದ್ದವು. ಹನುಮ ಜಯಂತಿಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಮುಸ್ಲಿಮರು ಮಜ್ಜಿಗೆ ವಿತರಣೆ ಮಾಡುವ ಮೂಲಕ ನಾವೆಲ್ಲರೂ ಒಂದೇ ಎಂಬ ಐಕ್ಯತೆ ಸಂದೇಶ ಸಾರಿದ್ದರು.

ಬೇಕಿದೆ ಕಾಯಕಲ್ಪ: ಮಹಾಶಕ್ತಿ ಶ್ರೀ ಆಂಜನೇಯ ಸ್ವಾಮಿ ಗುಡಿಯು ಹಳೆಯ ವಿನ್ಯಾಸ ಶೈಲಿಯಲ್ಲಿ ನಿರ್ಮಾಣವಾಗಿದೆ. ದಿನ ಕಳೆಯುತ್ತಿದ್ದಂತೆ ಗುಡಿ ಶಿಥಿಲವಾಗಿದೆ. ಗುಡಿ ನಿರ್ಮಾಣ ಸಂದರ್ಭದಲ್ಲಿ ಬಳಕೆ ಮಾಡಿದ ಮರಗಳು ಹೊಟ್ಟು ಹಿಡಿದಿದೆ. ಕ್ಷೇತ್ರದ ಹಿತದೃಷ್ಟಿಯಿಂದ ಶೀಘ್ರ ಜೀರ್ಣೋದ್ಧಾರವಾಗಬೇಕಿದೆ ಎಂಬುದು ಭಕ್ತರು ಹಾಗೂ ಸ್ಥಳೀಯರ ಮನವಿ.

ಮಾರ್ಗ: ಪಿರಿಯಾಪಟ್ಟಣ ತಾಲೂಕು ಕೇಂದ್ರದಿಂದ ಬೆಟ್ಟದಪುರ ಮಾರ್ಗವಾಗಿ ಸುಮಾರು 22 ಕಿ.ಮೀ. ಕ್ರಮಿಸಿದರೆ ಚಿಕ್ಕನೇರಳೆ (ಸಂತೆಮಾಳ) ಮುಖ್ಯ ವೃತ್ತ ಸಿಗಲಿದೆ. ಅಲ್ಲಿಂದ ಒಂದು ಕಿ.ಮೀ. ಕ್ರಮಿಸಿದರೆ ಚಿಕ್ಕನೇರಳೆ ಗ್ರಾಮ ಸಿಗಲಿದೆ. ಅಲ್ಲಿ ಸರ್ಕಾರಿ ಹಾಗೂ ಖಾಸಗಿ ವಾಹನಗಳ ಓಡಾಟ ಸಂಖ್ಯೆ ಕಡಿಮೆ. ಹಾಗಾಗಿ, ಸ್ವಂತ ವಾಹನದಲ್ಲಿ ಬಂದರೆ ಉತ್ತಮ. ಹೆಚ್ಚಿನ ಮಾಹಿತಿಗೆ ಅರ್ಚಕ ರಾಮಾಂಜನೇಯ ಮೊ: 6364150572, 7676334886 ಸಂಪರ್ಕಿಸಬಹುದು.

ಹಲವು ವರ್ಷಗಳಿಂದ ಈ ದೇವಸ್ಥಾನದಲ್ಲಿ ನಮ್ಮ ಕುಟುಂಬ ಅರ್ಚಕ ವೃತ್ತಿಯಲ್ಲಿ ತೊಡಗಿದೆ. ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಮನೆಯ ಶುಭ ಸಂದರ್ಭ ಸೇರಿದಂತೆ ಇತರ ಹಬ್ಬ-ಹರಿದಿನಗಳಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ.
ರಾಮಾಂಜನೇಯ, ಅರ್ಚಕ

ಚಂಗ್ವಾಳರ ಕಾಲದಲ್ಲಿ ಸುಮಾರು 21 ದೇವಸ್ಥಾನಗಳು ನಿರ್ಮಾಣವಾಗಿದ್ದವು. ಆ ಸಾಲಿನಲ್ಲಿ ನಮ್ಮೂರಿನ ಆಂಜನೇಯಸ್ವಾಮಿ ದೇವಸ್ಥಾನವೂ ಒಂದಾಗಿದೆ. ಆದರೆ ಈಗ ಈ ಗುಡಿಯು ಸಂಪೂರ್ಣ ಶಿಥಿಲವಾಗಿದ್ದು, ಬೀಳುವ ಹಂತ ತಲುಪಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಕಾಯಕಲ್ಪ ನೀಡಬೇಕು.
ಸಿ.ಪಿ ರಘು, ಸ್ಥಳೀಯ ಭಕ್ತ