ಜಿಲ್ಲೆ

ಇಷ್ಟಲಿಂಗ ಪೂಜೆಯಿಂದ ಸಂಕಲ್ಪ ಸಿದ್ಧಿ

ಲಕ್ಷೆ್ಮೕಶ್ವರ: ತನು, ಮನ, ಭಾವಕ್ಕೆ ಸಂಬಂಧಿಸಿ ಶೃದ್ಧೆ-ಭಕ್ತಿಯಿಂದ ಇಷ್ಟಲಿಂಗ ಪೂಜೆ ಮಾಡುವುದರಿಂದ ಬೌದ್ಧಿಕ, ಆಧ್ಯಾತ್ಮಿಕ, ನೈತಿಕ, ದೈಹಿಕ ಆರೋಗ್ಯ ಮತ್ತು ಆತ್ಮ ಸಂತೃಪ್ತಿ ಲಭಿಸುತ್ತದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷೆ್ಮೕಶ್ವರ ತಾಲೂಕು ಘಟಕದಿಂದ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಇಷ್ಟಲಿಂಗ ಪೂಜೆ ಮಾಡುವುದರಿಂದ ಕಷ್ಟ-ಕಾರ್ಪಣ್ಯಗಳು ಕಳೆದು ಸಂಕಲ್ಪ ಸಿದ್ಧಿಯಾಗುತ್ತದೆ. ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿ ದೇವರು, ಧರ್ಮ, ಸಂಸ್ಕೃತಿ, ಪೂಜೆ, ಪ್ರಾರ್ಥನೆ, ಧ್ಯಾನ, ಗುರು-ಹಿರಿಯರ ಬಗ್ಗೆ ಪೂಜ್ಯ ಭಾವ ಬೆಳೆಸಬೇಕು ಎಂದರು.

ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಾಧ್ಯಕ್ಷೆ ರಶ್ಮಿ ನಾಗರಾಜ ಮಾತನಾಡಿ, ಸಮಾಜ ಬಾಂಧವರೆಲ್ಲರೂ ಸಂಘಟಿತರಾಗಿ ಧಾರ್ವಿುಕ, ಸಾಮಾಜಿಕ ಕಾರ್ಯಕ್ಕೆ ಕೈ ಜೋಡಿಸಬೇಕು. ಮನುಷ್ಯ ಸಮಾಜಜೀವಿಯಾಗಿದ್ದು ನಿತ್ಯದ ಬದುಕಿನ ಜಂಜಾಟ, ಕೆಲಸದ ನಡುವೆ ಸಮಾಜಕ್ಕೆ ನಮ್ಮದೇ ಆದ ಉತ್ತಮ ಸೇವೆ, ಕೊಡುಗೆ ನೀಡಬೇಕು. ಆ.10ರಂದು ಹರಿಹರ ಪೀಠದಲ್ಲಿ ಇಷ್ಟಲಿಂಗ ಪೂಜೆ ಮತ್ತು ತುಂಗಭದ್ರಾ ನದಿಗೆ ಬಾಗಿನ ಕೊಡುವ ಕಾರ್ಯಕ್ರಮವಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿದರು. ರಾಜ್ಯ ಕಮಿಟಿ ಸದಸ್ಯೆ ವಸಂತಾ ಹುಲ್ಲತ್ತಿ, ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ, ಸಮಾಜದ ಹಿರಿಯರಾದ ಚಂಬಣ್ಣ ಬಾಳಿಕಾಯಿ, ದೇವಣ್ಣ ಬಳಿಗಾರ, ವಿಜಯಕುಮಾರ ಮಹಾಂತಶೆಟ್ಟರ್, ನೀಲಪ್ಪ ಕರ್ಜೆಕಣ್ಣವರ, ಚನ್ನಪ್ಪ ಜಗಲಿ, ವಿರುಪಾಕ್ಷಪ್ಪ ಆದಿ, ಬಸನಗೌಡ ಪಿಡ್ಡನಗೌಡ್ರ, ಶಿವಪುತ್ರಪ್ಪ ಚಾಕಲಬ್ಬಿ, ರುದ್ರಪ್ಪ ಉಮಚಗಿ, ಬಸವರಾಜ ಮೆಣಸಿನಕಾಯಿ, ಡಿ.ಸಿ. ಮರಳಿಹಳ್ಳಿ, ಶಂಭುಗೌಡ ಪಾಟೀಲ, ಕಿರಣ ಮೇಟಿ, ಮಂಜುನಾಥ ಕಣವಿ ಮೊದಲಾದವರು ಸೇರಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಇಷ್ಟಲಿಂಗ ಪೂಜೆಯಲ್ಲಿ ಪುರುಷರು ಬಿಳಿ ಬಣ್ಣದ ಉಡುಪು ಮತ್ತು ಮಹಿಳೆಯರು ಹಸಿರು ಬಣ್ಣದ ಉಡುಪು ಧರಿಸಿಕೊಂಡು ಧರಿಸಿ ಪೂಜೆಯಲ್ಲಿ ಪಾಲ್ಗೊಂಡು ಕಂಗೊಳಿಸಿದರು. ಜಿ.ಎಸ್. ಗುಡಗೇರಿ, ಸೋಮಶೇಖರ ಕೆರಿಮನಿ ನಿರ್ವಹಿಸಿದರು.