ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶದಲ್ಲಿ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿದರು. ಡಾ.ಅಮರನಾಥ ಸೋಲಪುರೆ, ಜಯಪ್ರಕಾಶ ಸದಾನಂದೆ, ದತ್ತಾತ್ರೆ, ಜಗದೇವಿ ಹೊಳಕುಂದೆ, ಮೀನಾ ಜಾಧವ್ ಇದ್ದರು. 
ಜಿಲ್ಲೆ

ಇಷ್ಟಲಿಂಗ ಪೂಜೆಯಿಂದ ಅಂತರಂಗ ಶುದ್ಧಿ

ಬಸವಕಲ್ಯಾಣ: ಇಷ್ಟಲಿಂಗ ಪೂಜೆಯಿಂದ ನಮ್ಮ ಅಂತರಂಗ ಶುದ್ಧಿಯಾಗುತ್ತದೆ. ನಿತ್ಯವೂ ಪೂಜೆ ಮಾಡುವುದರಿಂದ ಸಂಸ್ಕಾರ, ಒಳ್ಳೆಯ ಆಚಾರ, ವಿಚಾರ ಕಲಿಸುತ್ತದೆ ಎಂದು ಹರಳಯ್ಯ ಗವಿಯ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ನಗರದ ಹರಳಯ್ಯನವರ ಗವಿಯಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶ ಹಾಗೂ ಯೋಗ ದಿನಾಚರಣೆ ನಿಮಿತ್ತ ಇಷ್ಟಲಿಂಗ ಪೂಜಾಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಹದ ಮೇಲೆ ಲಿಂಗ ಕಟ್ಟಿ ಸುಮ್ಮನಿದ್ದರೆ ನಮಗೆ ಯಾವ ಯೋಗವೂ ಸಿಗುವುದಿಲ್ಲ. ಇಷ್ಟಲಿಂಗ ಪೂಜೆ ಮಾಡಿ, ಆಚರಣೆ ಮಾಡಿದ್ದಾಗ ಅದರ ಫಲ ಸಿಗುತ್ತದೆ. ದೇವರನ್ನು ಇಷ್ಟಲಿಂಗದಲ್ಲೇ ಕಾಣಬಹುದು ಎಂದರು.

ಯೋಗ ಕೇವಲ ಆಸನಗಳಷ್ಟೇ ಅಲ್ಲ ಬುದ್ಧಿ ಮತ್ತು ಮನಸ್ಸು, ದೇಹವನ್ನು ಸುಸ್ಥಿತಿಯಲ್ಲಿಡುವುದು. ಶರಣರು ಇಷ್ಟಲಿಂಗದ ಮೂಲಕ ಶಿವಯೋಗ ಪರಿಚಯಿಸಿದ್ದಾರೆ. ನಿತ್ಯ ಪೂಜೆ ಮಾಡಿಕೊಳ್ಳುವದರ ಮೂಲಕ ಅಂತರಂಗ, ಬಹಿರಂಗ ಶುದ್ಧ ಮಾಡೊಕೊಳ್ಳಬಹದು ಎಂದು ಹೇಳಿದರು.

ಇಷ್ಟಲಿಂಗ ಅರಿವಿನ ಕುರುಹಾಗಿದೆ. ಸದಾಚಾರಕ್ಕೆ ಮೂಲ ಲಿಂಗಾಧಾರಣೆ. ಆಚರಣೆಯ ಮೊದಲ ಮೆಟ್ಟಿಲೇ ಲಿಂಗಧಾರಣೆ. ಯೋಗ ಬಾಹ್ಯ ಪ್ರದರ್ಶನವಲ್ಲ. ಅಂತರದರ್ಶನಕ್ಕೆ ಸ್ಫೂರ್ತಿಯಾಗಬೇಕು. ಧ್ಯಾನ ಪ್ರಾಣಾಯಾಮದ ಜತೆಗೆ ವಚನಗಳನ್ನು ಹೇಳುವ ಮೂಲಕ ಯೋಗದ ಕಡೆ ಸಾಗಬೇಕು ಎಂದು ತಿಳಿಸಿದರು.

ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಉಪನ್ಯಾಸ ನೀಡಿ, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ ಎಂದು ಮೂರು ಪ್ರಕಾರ ತನು-ಮನ-ಭಾವಕ್ಕೆ ಸಂಬಂಧಿಸಿದ ಪೂಜೆ ಮಾಡುವ ವಿಧಾನವಾಗಿದೆ. ಬಸವಣ್ಣನವರು ಇಷ್ಟಲಿಂಗದ ಜನಕರಾಗಿದ್ದಾರೆ ಎಂದು ಶಿವಯೋಗಿ ಸಿದ್ದರಾಮೇಶ್ವರರು ತಮ್ಮ ವಚನದಲ್ಲಿ ಹೇಳಿದ್ದಾರೆ ಎಂದರು.

ಲಿಂಗಾಯತ ಧರ್ಮದ ಸಿದ್ಧಾಂತ ಅರಿಯುವುದು ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯವಾಗಿದೆ. ಲಿಂಗಧಾರಣೆ ಮಾಡಿದ ಮೇಲೆ ದುರ್ಗುಣ ತ್ಯಜಿಸಿ ಸದ್ಗುಣ ಅಳವಡಿಸಿಕೊಳ್ಳಬೇಕು . ಇಷ್ಟಲಿಂಗ ನಿಷ್ಠೆ ಹೊಂದಲು ವಚನ ಸಾಹಿತ್ಯ ಮತ್ತು ಶರಣರ ಬದುಕು ಅರಿಯುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಬಸವ ತತ್ವ ಪ್ರಸಾರ ಕೇಂದ್ರದ ಅಧ್ಯಕ್ಷ ಜಯಪ್ರಕಾಶ ಸದಾನಂದೆ, ಹಡಪದ ಅಪ್ಪಣ್ಣ ಸಮಾಜದ ಮುಖಂಡ ದತ್ತಾತ್ರೆ ಮೂಗೆ, ಜಗದೇವಿ ಸುಭಾಷ ಹೊಳಕುಂದೆ ಇತರರಿದ್ದರು. ಸುಲೋಚನಾ ಮಾಮಾ ವಚನ ಪಠಣ ಮಾಡಿದರು. ಹರಳಯ್ಯ ಸಮಾಜದ ಮೀನಾ ಜಾಧವ್ ಧ್ವಜಾರೋಹಣಗೈದರು. ಶಿಕ್ಷಕರಾದ ಅನೀಲ ಕಾಂಬ್ಳೆ, ಅವಿನಾಶ ಬೋಸಗಾ ವಚನ ಸಂಗೀತ ನಡೆಸಿಕೊಟ್ಟರು. ಸಂಗಮೇಶ ತೊಗರಖೇಡೆ ನಿರೂಪಣೆ ಮಾಡಿದರು.

ಇಷ್ಟಲಿಂಗವು ೧೨ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ಪ್ರತಿ ದಿನ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರಿಂದ ವಿಪತ್ತುಗಳು ದೂರವಾಗುತ್ತವೆ. ಪೂಜೆಯಿಂದ ಏಕಾಗ್ರತೆ, ನೈತಿಕತೆ, ಆರೋಗ್ಯ ಹಾಗೂ ಆತ್ಮವಿಶ್ವಾಸ ವೃದ್ಧಿಸುತ್ತದೆ. ಮಾನಸಿಕ ನೆಮ್ಮದಿ ದೊರಕುತ್ತದೆ.

| ಡಾ.ಗಂಗಾಂಬಿಕಾ ಅಕ್ಕ ಹರಳಯ್ಯ ಗವಿ ಮಠ

ವಚನಗಳಲ್ಲಿ ಅಗಾಧ ಶಕ್ತಿ ಅಡಗಿದ್ದು, ಸಮಾಜ ಸುಧಾರಣೆ ನಿಟ್ಟಿನಲ್ಲಿ ಜಗತ್ತಿನ ಎಲ್ಲ ಕ್ರಾಂತಿಗಳಿಗಿಂತ ವಚನ ಕ್ರಾಂತಿ ಶ್ರೇಷ್ಠ. ವಚನ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿ ಬೇರು. ಶರಣರು ರಚಿಸಿದ ವಚನಗಳ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುತ್ತವೆ.

| ಡಾ.ಅಮರನಾಥ ಸೋಲಪುರೆ

ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್