ಜಿಲ್ಲೆ

ಇವಿಎಂ ಬಳಕೆ ಪ್ರಜಾಪ್ರಭುತ್ವಕ್ಕೆ ಮಾರಕ

ಚಿತ್ರದುರ್ಗ: ಇವಿಎಂ ಮತಯಂತ್ರ ಬಳಕೆಯಿಂದ ಭಾರತದ ಚುನಾವಣಾ ವ್ಯವಸ್ಥೆ ನ್ಯಾಯಯುತ, ಸರ್ವ ಸಮ್ಮತವಾಗಿ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ದೂರಿದರು.

ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಇವಿಎಂ ಮತಯಂತ್ರ ವಿಷಯ ಕುರಿತು ಮಾತನಾಡಿದರು.

ಇದರ ಬಳಕೆಯಿಂದ ಮುಂಬರುವ ದಿನಗಳಲ್ಲಿ ದೇಶವನ್ನು ನಿರಂಕುಶಾಧಿಕಾರದ ಕಡೆಗೆ ಕೊಂಡೊಯ್ಯುತ್ತವೆ ಎಂಬ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ಯಂತ್ರದೊಳಗೆ ಅಳವಡಿಸಿರುವ ಸಾಫ್ಟ್‌ವೇರ್ ಪರಿಶೀಲಿಸಲು ಸಾರ್ವಜನಿಕರಿಗೆ, ರಾಜಕೀಯ ಪಕ್ಷಗಳಿಗೆ ಅವಕಾಶ ನೀಡದೆ, ಅಪಾರದರ್ಶಕತೆಯಿಂದ ಕೂಡಿರುವುದು ಕಾರಣ ಎಂದರು.

ಇವಿಎಂ ಮುಚ್ಚಿದ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಚುನಾವಣಾ ಫಲಿತಾಂಶಗಳ ನ್ಯಾಯ ಸಮ್ಮತತೆಯ ಕುರಿತು ಕಳವಳ ಉಂಟು ಮಾಡಿದೆ. ಡಿಜಿಟಲ್ ಸ್ವರೂಪ ಹ್ಯಾಕಿಂಗ್-ಟ್ಯಾಪಿಂಗ್‌ಗೆ ಗುರಿಯಾಗುವಂತೆ ಮಾಡುತ್ತದೆ. ಇದು ಚುನಾವಣಾ ಪ್ರಕ್ರಿಯೆಯ ಪಾವಿತ್ರತೆಗೆ ಧಕ್ಕೆ ತರಲಿದೆ ಎಂದು ಹೇಳಿದರು.

ಇವಿಎಂ ಮತದಾನದ ಭೌತಿಕ ಪ್ರತಿ ಉತ್ಪಾದಿಸುವುದಿಲ್ಲ. ಇದರಿಂದಾಗಿ ಮತಗಳ ಲೆಕ್ಕ ಪರಿಶೀಲಿಸುವುದು ಸವಾಲಾಗಿದೆ. ಮತದಾರರ ಹಕ್ಕು ಖಚಿತಪಡಿಸುವುದನ್ನು ನಿರಾಕರಿಸುತ್ತದೆ. ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಚಲಾವಣೆಯಾದ ಮತಗಳ ಅದಲು-ಬದಲು ಮಾಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ. ಹೀಗಾಗಿ ಗೊಂದಲ ಮತ್ತು ಅನುಮಾನ ಕಾರಣವಾಗಿದೆ ಎಂದರು.

ಚುನಾವಣೆ ಸತ್ಯ, ನಿಷ್ಪಕ್ಷಪಾತವಾಗಿ ನಡೆಯಲು ಚಲಾವಣೆಯಾದ ಮತಗಳನ್ನು ಮೊದಲು ದಾಖಲಿಸಬೇಕು. ನಂತರ ವಿ.ವಿ.ಪ್ಯಾಟ್‌ನಲ್ಲಿ ಮುದ್ರಣಗೊಂಡು ಬರುವ ಮತ ಚೀಟಿಯನ್ನು ಮತದಾರರಿಗೆ ತೋರಿಸಬೇಕು. ಅಲ್ಲದೆ, ಅವುಗಳನ್ನು ಸಂರಕ್ಷಿಸಿ ಅಂತಿಮ ಎಣಿಕೆ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು.

ವಿಹಾರದ ಕಾರ್ಯಾಧ್ಯಕ್ಷ ಬಿ.ಪಿ.ಪ್ರೇಮನಾಥ್, ನಗರಸಭೆ ನಿವೃತ್ತ ಆಯುಕ್ತ ಗುಬ್ಬಿ ಹನುಮಂತಪ್ಪ, ಉಪನ್ಯಾಸಕರಾದ ನಾಗೇಂದ್ರಪ್ಪ, ನೀತಿಗೆರೆ ಮಂಜಪ್ಪ, ಭೀಮನಕೆರೆ ತಿಪ್ಪೇಸ್ವಾಮಿ, ಜಗದೀಶ್, ಚಳ್ಳಕೆರೆಯ ಕರಿಬಸಪ್ಪ , ನಿಸರ್ಗ ಟ್ರಸ್ಟ್ನ ದುರ್ಗೇಶ, ಶಕುಂತಲಾ, ಬನ್ನಿಕೋಡ್ ರಮೇಶ್, ಬುರುಜನರೊಪ್ಪ ಹನುಮಂತಪ್ಪ, ಅನುಷ್ ಇತರರಿದ್ದರು.