ಹುಬ್ಬಳ್ಳಿ: ಯುಗಾದಿ ಮುನ್ನಾ ದಿನ ಮುಗಿಬಿದ್ದು ತರಕಾರಿ ಖರೀದಿಸಿದ್ದ ನಗರದ ಜನತೆ ಶುಕ್ರವಾರವೂ ಮುನ್ನೆಚ್ಚರಿಕೆ ವಹಿಸಲಿಲ್ಲ. ಮಹಾಮಾರಿ ಕರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ನಗರದಲ್ಲಿ ಮಾರುಕಟ್ಟೆ ಸ್ಥಳ ಬದಲಾಯಿಸಿದ್ದರೂ ಎಲ್ಲೆಡೆ ಅಂತರವನ್ನು ಕಾಯ್ದುಕೊಳ್ಳದೇ ಜನಜಂಗುಳಿ ಸೃಷ್ಟಿಯಾಗಿದ್ದವು.
ದುರ್ಗದಬೈಲ್- ಸರಾಫ್ಗಟ್ಟಿ- ಹಿರೇಪೇಟ- ಜನತಾ ಬಜಾರ್ ಮಾರುಕಟ್ಟೆಯನ್ನು ನೆಹರು ಮೈದಾನಕ್ಕೆ, ಹಳೇ ಹುಬ್ಬಳ್ಳಿ ಮಾರುಕಟ್ಟೆಯನ್ನು ಹೆಗ್ಗೇರಿ ಮೈದಾನಕ್ಕೆ, ಎಲ್ಲ ವಾರದ ಸಂತೆಯನ್ನು ಹೊಸ ಬಸ್ ನಿಲ್ದಾಣಕ್ಕೆ, ಗಣೇಶಪೇಟ ಮಾರುಕಟ್ಟೆಯನ್ನು ಸೆಟ್ಲಮೆಂಟ್ ಹಾಕಿ ಮೈದಾನಕ್ಕೆ, ಹಣ್ಣು ಮಾರಾಟವನ್ನು ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಹಳೇ ಬಸ್ ನಿಲ್ದಾಣದಲ್ಲೂ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲೆಡೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗಿತ್ತು.
ಸೆಟ್ಲಮೆಂಟ್, ಹೆಗ್ಗೇರಿಯಲ್ಲಿ ಅಷ್ಟೇನೂ ಜನದಟ್ಟಣೆ ಇರಲಿಲ್ಲ. ತಕ್ಕಮಟ್ಟಿಗೆ ಅಂತರವನ್ನು ಕಾಯ್ದುಕೊಂಡಿದ್ದರು. ಆದರೆ, ಹಳೇ ಬಸ್ ನಿಲ್ದಾಣ ಹಾಗೂ ನೆಹರು ಮೈದಾನದಲ್ಲಿ ಪಕ್ಕಾ ವಾರದ ಸಂತೆಯಂತೆ ಜನತೆ ಖರೀದಿಗೆ ಮುಗಿಬಿದ್ದಿದ್ದರು. 1 ಮೀಟರ್ ಅಂತರ ಕಾಯ್ದುಕೊಳ್ಳುವುದಿರಲಿ, ಮೈಗೆ ಮೈ ತಾಗಿಸಿಕೊಂಡು ಖರೀದಿ ಮಾಡಿದರು. ಇನ್ನೇನು ನಾಳೆಯಿಂದ ತರಕಾರಿ ಸಿಗುವುದೇ ಇಲ್ಲವೆಂಬಂತೆ ಖರೀದಿಯಲ್ಲಿ ನಿರತರಾಗಿದ್ದರು. ಈದ್ಗಾ ಮೈದಾನದಲ್ಲಿ ಜನ ಜಂಗುಳಿ ಇರದಿದ್ದರೂ ಅಂತರವನ್ನು ಕಾಯ್ದುಕೊಳ್ಳಲಿಲ್ಲ. ಒಬ್ಬ ವ್ಯಾಪಾರಿ ಬಳಿ ನಾಲ್ಕೈದು ಜನರು ಸೇರಿದ್ದರು.
ಪೊಲೀಸರು ಧ್ವನಿವರ್ಧಕದಲ್ಲಿ ‘ದೂರ ದೂರ ನಿಂತು ಖರೀದಿಸಿ....ಅಂತರ ಕಾಯ್ದುಕೊಳ್ಳಿ’ ಎಂದು ಮನವಿ ಮಾಡುತ್ತಿದ್ದರು. ಇದ್ಯಾವುದನ್ನೂ ಲೆಕ್ಕಿಸದೇ ಜನತೆ ಖರೀದಿಯಲ್ಲಿ ಮಗ್ನರಾಗಿದ್ದರು. ನೆಹರು ಮೈದಾನದಲ್ಲಿ 80 ಜನ ಮಾರಾಟಗಾರರು ಕುಳಿತುಕೊಳ್ಳಲು, ಪ್ರತಿ ಮಾರಾಟಗಾರರ ಎದುರು 10-20 ಜನ ಸರದಿ ಸಾಲಿನಲ್ಲಿ ನಿಂತುಕೊಳ್ಳುವಂತೆ ಪಾಲಿಕೆ ಗುರುತು ಹಾಕಿತ್ತು. ಆದರೆ, ಜನರು ಗುಂಪು ಗುಂಪಾಗಿ ಖರೀದಿಸಿದರು. ಹಳೇ ಬಸ್ ನಿಲ್ದಾಣದಲ್ಲಿ 20-25 ಜನ ಮಾರಾಟಗಾರರು ಇದ್ದರು. ನೂರಾರು ಜನ ಖರೀದಿಗೆ ಜಮಾಯಿಸಿದ್ದರು.
ಬೆಳಗ್ಗೆ 7.30ರಿಂದ 10ರವರೆಗೆ ಖರೀದಿಗೆ ಅವಕಾಶ ನೀಡಲಾಗಿತ್ತು. ಪಾರಂಪರಿಕ ಮಾರುಕಟ್ಟೆಯಲ್ಲಿ ಜನಜಂಗುಳಿ ನಿಯಂತ್ರಿಸಲು ಜಿಲ್ಲಾಡಳಿತ ನಗರದ ವಿವಿಧೆಡೆ ಮಾಡಿದ್ದ ಮಾರುಕಟ್ಟೆ ವ್ಯವಸ್ಥೆ ಫೇಲ್ ಆಗಿದೆ.
ಮಾಸ್ಕ್ ಕಡ್ಡಾಯ: ಜನರ ಓಡಾಟ ಕಡಿಮೆಯಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಗೆ ಬರುವ ಬಹುತೇಕ ಜನರು ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ. ತರಕಾರಿ ಮಾರುಕಟ್ಟೆಗೆ ಖರೀದಿಗೆ ಬರುವವರು ಹಾಗೂ ಮಾರಾಟಗಾರರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕಿತ್ತು. ಮಾಸ್ಕ್ ಇಲ್ಲದವರಿಗೆ ಪೊಲೀಸರು ಖರೀದಿಗೆ ಅವಕಾಶ ನೀಡಲಿಲ್ಲ. ನೆಹರು ಮೈದಾನದಲ್ಲಿ ಕೆಲವರು ಇದೇ ಕಾರಣಕ್ಕೆ ಲಾಠಿ ಏಟು ತಿಂದಿದ್ದಾರೆ. ಮೈದಾನದ ಹೊರಗಡೆ ಹಾಗೂ ನಗರದಲ್ಲಿ ವಿವಿಧೆಡೆ ರಸ್ತೆಯಲ್ಲಿ ಮಾಸ್ಕ್ ಮಾರಾಟ ಜೋರಾಗಿ ನಡೆದಿತ್ತು.