ಡಿ.ಎಂ.ಮಹೇಶ್, ದಾವಣಗೆರೆ: ರಕ್ತಪೂರಣದ ಮೇಲೆ ಜೀವನ ಅವಲಂಬಿತರು ಥಲಸೀಮಿಯಾ ರೋಗಿಗಳು, ಇವರಲ್ಲಿ ರಕ್ತಹೀನತೆ ನಿರಂತರ, ಈ ಕಾಯಿಲೆಯ ತೀವ್ರತೆ ಅನುಸಾರ ಅವರಿಗೆ ಜೀವನಪರ್ಯಂತ 15 ದಿನದಿಂದ ಮಾಸಕ್ಕೊಮ್ಮೆ ಕೆಂಪು ರಕ್ತಕಣಗಳನ್ನು ಪೂರೈಸುವುದು ಅನಿವಾರ್ಯ.
ದಾವಣಗೆರೆ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ರೋಗಿಗಳಿರುವ ಅಂದಾಜಿದೆ. ಆದರೆ ಸರ್ಕಾರಿ ಲೆಕ್ಕದಲ್ಲಿ 50 ಮಂದಿ ಇದ್ದಾರೆ. ಬೆಗಟೇರಿ ಆಸ್ಪತ್ರೆ ಒಂದರಲ್ಲಿ 42 ಮಂದಿ ನೋಂದಣಿಯಾಗಿದ್ದು ಪ್ರತಿ ತಿಂಗಳು 30 ರೋಗಿಗಳು ಕೆಂಪು ರಕ್ತಕಣಗಳು ಉಚಿತ ಸೌಲಭ್ಯ ಪಡೆಯುತ್ತಿದ್ದಾರೆ. ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲೂ ಈ ಸೇವೆ ನಡೆಯುತ್ತಿದೆ.
ಆರೋಗ್ಯವಂತ ಮನುಷ್ಯನ ಮೂಳೆಮಜ್ಜೆಯಲ್ಲಿ ಉತ್ಪತ್ತಿಯಾಗುವ ಕೆಂಪು ರಕ್ತಕಣಗಳು, 120 ದಿನದವರೆಗೆ ಮಾತ್ರ ಬದುಕಿರುತ್ತವೆ. ಇವು ಆಮ್ಲಜನಕವನ್ನು ಜೀವಕೋಶಗಳಿಗೆ ಸರಬರಾಜು ಮಾಡುವುದಲ್ಲದೆ ಇಂಗಾಲದ ಡೈ ಆಕ್ಸೆಡ್ ಅನ್ನು ಹೊರದೂಡಿ ಆರೋಗ್ಯ ಕಲ್ಪಿಸುತ್ತವೆ. ವ್ಯಕ್ತಿಯನ್ನು ಚೈತನ್ಯಯುತವಾಗಿ ಇರಿಸುತ್ತವೆ. ಆದರೆ ಥಲಸೀಮಿಯಾ ರೋಗಿಗಳಲ್ಲಿ ನಿಗದಿತ ಅವಧಿಗೂ ಮುನ್ನವೇ 10ರಿಂದ 50 ದಿನದಲ್ಲಿ ಇವು ನಾಶವಾಗುತ್ತವೆ. ಈ ರೋಗಿಗಳಿಗೆ ಸರ್ಕಾರ ಸರ್ಕಾರೇತರ ಸಂಸ್ಥೆಗಳಿಂದ ಸಿಗುವ ಕೆಂಪು ರಕ್ತ ಕಣಗಳು ದೇಹ ಸೇರಿದ ಕಾಲಕ್ರಮೇಣ ಪ್ರೋಟೀನ್ ಅಂಶ ಕರಗಿ ಕಬ್ಬಿಣಾಂಶದ ಗುಲ್ಮದ ಗಾತ್ರ ಹಿಗ್ಗುತ್ತದೆ. ಇದರಿಂದ ದೇಹದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ.
ಕಬ್ಬಿಣಾಂಶ ಕರಗಿಸಲು ಐರನ್ ಚಿಲೇಷನ್ ಎಂಬ ಮಾತ್ರೆ/ ಚುಚ್ಚುಮದ್ದು ಪಡೆಯಲು ತಿಂಗಳಿಗೆ 3ರಿಂದ 4 ಸಾವಿರ ರೂ. ವೆಚ್ಚವಾಗುತ್ತಿದೆ. ಈ ಮಾತ್ರೆಯನ್ನು ಚಿಗಟೇರಿ ಆಸ್ಪತ್ರೆಯಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ. ಕೆಲವರು ಇದರ ಲಾಭ ಪಡೆಯುತ್ತಿದ್ದಾರೆ. ಆಪ್ತ ಸಮಾಲೋಚನೆ, ಮಾಹಿತಿ ಶಿಕ್ಷಣವಿಲ್ಲದೆ ಕೆಲವರು ಚಿಕಿತ್ಸೆಯಿಂದ ದೂರವೇ ಇದ್ದಾರೆ.
ಕೆಲವು ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಯೂನಿಟ್ ಅನ್ನು ಪ್ರತ್ಯೇಕಿಸಿ ಆಯಾ ರೋಗಕ್ಕೆ ಅಗತ್ಯ ರಕ್ತಕಣಗಳನ್ನು ನೀಡಲಾಗುತ್ತದೆ. ಹಾಗೆ ಪ್ರತ್ಯೇಕಿಸಿಲ್ಪಟ್ಟ ಕೆಂಪು ರಕ್ತ ಕಣಗಳನ್ನು 35 ದಿನಗಳು ಮಾತ್ರ
ಸಂಗ್ರಹಿಸಿಡಲು ಯೋಗ್ಯ. ಥಲಸೀಮಿಯಾ ರೋಗಿಗೆ ಒಮ್ಮೆಗೆ 150ರಿಂದ 200 ಮಿ.ಲೀ. ವರೆಗೆ ಈ ಕಣಗಳನ್ನು ಪೂರೈಸಲಾಗುತ್ತಿದೆ. ಅವರು ಮತ್ತು ಪಾಲಕರಿಗೆ ಆರೋಗ್ಯ ಮಾಹಿತಿ ಶಿಕ್ಷಣ ನೀಡುವುದಗತ್ಯ ಎಂಬುದು ವೈದ್ಯರ ಮಾತು.
ರಸ್ತೆ ಅಪಘಾತ, ಹೆಣ್ಣು ಮಕ್ಕಳಲ್ಲಿನ ರಕ್ತಸ್ರಾವ, ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ಅಗಬಲ್ಲ ರಕ್ತಹೀನತೆಯನ್ನು ಉಪಶಮನ ಮಾಡಬಹುದು. ಅದರೆ ಥಲಸೀಮಿಯಾ ರೋಗಿಗಳ ರಕ್ತಹೀನತೆ ನಿವಾರಣೆ ಸರಳವಲ್ಲ, ಜೀವನ ಪರ್ಯಂತ ರಕ್ತ ಪೂರಣ ಮಾಡುವುದು ಅನಿವಾರ್ಯ. ಹೀಗಾಗಿ ಸ್ವಯಂಪ್ರೇರಿತ ರಕ್ತದಾನಕ್ಕೆ ಯುವಕರ ಸಂಖ್ಯೆ ಹೆಚ್ಚಬೇಕಿದೆ.
ಜಿಲ್ಲೆಯಲ್ಲಿ 17 ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ 18ರಿಂದ 60 ವರ್ಷದೊಳಗಿನವರು 10 ಲಕ್ಷ ಇರಬಹುದು, ಇದರಲ್ಲಿ ಅರ್ಧದಷ್ಟು ಜನರು ವರ್ಷಕ್ಕೊಮ್ಮೆ ರಕ್ತದಾನ ಮಾಡಿದರೆ, ಥಲಸೀಮಿಯಾ, ಸಿಕಲ್ ಸೆಲ್ ಪೀಡಿತರು ಮತ್ತು ಬ್ಲಡ್ ಅವಶ್ಯವಿದ್ದವರಿಗೆ ಪುರೈಸಬಹುದು ಎನ್ನುತ್ತಾರೆ ಚಿಗಟೇರಿ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಗೀತಾ.
ಕೋಟ್
ರಕ್ತಸ್ರಾವಕ್ಕೆ ಒಳಾಗುವವರು ನಿಯಮಿತವಾಗಿ ಹಿಮೋಗ್ಲೋಬಿನ್
ಪ್ರಮಾಣ ಪರೀಕ್ಷಿಸಿಕೊಳ್ಳಬೇಕು. ಕಾಲೇಜು ಪರೀಕ್ಷೆ ನಿಷೇಧಾಜ್ಞೆ ಇತರ ಸಂದರ್ಭಗಳಲ್ಲಿ ರಕ್ತದಾನಿಗಳ ಕೊರತೆ ಕಾಡಬಹುದು. ಇದಕ್ಕೆಪರ್ಯಾಯ ಸಿದ್ಧತೆ ಮಾಡಿಕೊಳ್ಳಬೇಕು,
ಡಾ. ಸುರೇಶ್ ಹನಗವಾಡಿ,
ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ
ಕೋಟ್
ರಕ್ತಸ್ತಾವ ಕಾರಣಕ್ಕೆ ಮಹಿಳೆಯರೂ ಸೇರಿ ಅನೇಕರಲ್ಲಿತಪ್ಪು ಕಲ್ಪನೆಗಳಿವೆ. ಆಸ್ಪತ್ರೆಯೊಂದರಲ್ಲಿ ರಕ್ತದಾನದ ಬಗ್ಗೆ ಕೊರತೆಯಿಂದಾಗಿ ಮಕ್ಕಳು ಮೃತಪಟ್ಟ ಮಾಹಿತಿ ತಿಳಿದು ಬೇಸರವಾಯಿತು. ಅಂದಿನಿಂದ ರಕ್ತದಾನ ಮಾಡುತ್ತಿದ್ದೇನೆ. ಕುಟುಂಬದವರಿಗೂ ಪೇರೇಪಿಸುತ್ತಿದ್ದೇನೆ.
ಎ.ಎಲ್. ಪಲ್ಲವಿ ಶಿಕ್ಷಕಿ/ರಕ್ತದಾನಿ.