ರಾಣೆಬೆನ್ನೂರ: ಜಿಲ್ಲೆಯಲ್ಲಿ ಕರೊನಾ ಮಹಾಮಾರಿ ವೈರಸ್ ಅವಾಂತರಗಳ ಅರಿವಿದ್ದರೂ ಜನರು ಮನೆಗಳಿಂದ ಹೊರ ಬಂದು ಸುತ್ತಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇದು ಜಿಲ್ಲಾಡಳಿತಕ್ಕೂ ತಲೆನೋವಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.
ಜಿಲ್ಲೆಯಲ್ಲಿ ಈವರೆಗೆ 551 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹಲವರನ್ನು ಸರ್ಕಾರಿ ಕ್ವಾರಂಟೈನ್ನಲ್ಲಿಡಲಾಗಿದೆ. ವಿಜಯಪುರ ವ್ಯಕ್ತಿಯ ಸಂಪರ್ಕದ ಹಿನ್ನೆಲೆಯಲ್ಲಿ ಭಾನುವಾರ ಹಾನಗಲ್ಲ ತಾಲೂಕಿನ ಆಡೂರಿನ 21 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಈವರೆಗೆ ಯಾರಿಗೂ ಕರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆದರೆ, ಜನರು ಮಾತ್ರ ಯಾವುದೇ ಮುಂಜಾಗ್ರತೆ ಕ್ರಮ ಅನುಸರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ಜನವಸತಿ ಪ್ರದೇಶ, ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪಾಯ ಸೃಷ್ಟಿಸಿದೆ.
ನಗರ, ಪಟ್ಟಣ, ಗ್ರಾಮೀಣ ಭಾಗದಲ್ಲಿ ಬೆಳಗ್ಗೆಯಿಂದಲೇ ಜನರು ಬೀದಿಗಿಳಿಯುತ್ತಿದ್ದಾರೆ. ಆರಂಭದಲ್ಲಿ ಲಾಕ್ಡೌನ್ ಆದಾಗ ಇದ್ದ ಬಿಗಿ ಈಗ ಇಲ್ಲದಂತಾಗಿದೆ. ಪೊಲೀಸರು ವಾಹನ ಜಪ್ತಿ ಮಾಡುತ್ತಾರೆಂದು ಕಿಡಿಗೇಡಿಗಳು ಕಳ್ಳ ಹಾದಿಗಳ ಮೂಲಕ ಸುತ್ತಾಡುತ್ತಿದ್ದಾರೆ. ಮುಖ್ಯ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದರಿಂದ ಒಳ ರಸ್ತೆಗಳಲ್ಲಿ ಸುತ್ತಾಡುತ್ತಿದ್ದಾರೆ. ಪೊಲೀಸರು ಬಹಳಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರೂ ಜನರ ಸಹಕಾರ ಮಾತ್ರ ಮರೀಚಿಕೆಯಾಗಿದೆ.
ಲಾಕ್ಡೌನ್ ನಂತರ ಜಪ್ತಿ ಮಾಡಿದ ವಾಹನಗಳು, ವಸೂಲಿ ಮಾಡಿದ ದಂಡ 25 ಲಕ್ಷ ರೂ. ದಾಟಿದ್ದು, ದಾಖಲೆ ಪ್ರಮಾಣದಷ್ಟಿದೆ. 850ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ ಐಎಂವಿ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಆದರೆ, ಜನರು ಮಾತ್ರ ಬುದ್ಧಿ ಕಲಿತಿಲ್ಲ. ಪೆಟ್ರೋಲ್ ಬಂಕ್ಗಳಲ್ಲಿ ತುರ್ತು ಸೇವೆಗೆ ಹೊರತುಪಡಿಸಿ, ಬೇರೆಯವರಿಗೆ ಪೆಟ್ರೋಲ್, ಡೀಸೆಲ್ ಹಾಕಲು ಅವಕಾಶವಿಲ್ಲ. ಆದರೆ, ವಿನಾಕಾರಣ ಸುತ್ತುವವರಿಗೆ ಎಲ್ಲಿಂದ ಪೆಟ್ರೋಲ್ ಸಿಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ.
ಜಿಲ್ಲೆಯಲ್ಲಿ ಪೊಲೀಸರು ಚೆಕ್ ಪೋಸ್ಟ್ ಸ್ಥಾಪಿಸಿ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಬ್ಯಾರಿಕೇಡ್ ಹಾಕಿ, ಅನಗತ್ಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ, ಜನ ಮಾತ್ರ ತಾವು ಚಾಪೆ ಕೆಳಗೆ ನುಸುಳಲು ನಿಸ್ಸೀಮರೆಂಬುದನ್ನು ತೋರಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.
ನ್ಯಾಯ ಬೆಲೆ ಅಂಗಡಿ, ಕಿರಾಣಿ ಅಂಗಡಿ, ಮೆಡಿಕಲ್ ಹಾಗೂ ಆಹಾರ ಕಿಟ್ ವಿತರಣೆ ನೆಪವೊಡ್ಡಿ ತಿರುಗುವವರು ಹೆಚ್ಚಾಗಿದ್ದಾರೆ. ಜನ ವಸತಿ ಪ್ರದೇಶ, ಹರಟೆಕಟ್ಟೆ ಮತ್ತಿತರ ಕಡೆಗಳಲ್ಲಿ ಗುಂಪು ಕಟ್ಟಿಕೊಂಡು ಜನ ಸೇರುತ್ತಿದ್ದಾರೆ. 2ನೇ ಹಂತದ ಲಾಕ್ಡೌನ್ನಲ್ಲಿ ರೈತರಿಗೆ ತೊಂದರೆ ಆಗದಂತೆ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗಿದೆ. ಇದನ್ನೇ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಅಂತರ ಎಂಬುದಂತೂ ಬರೀ ಘೊಷಣೆಗೆ ಸೀಮಿತವಾಗಿದೆ.
ನಿಯಮ ಪಾಲನೆಯೇ ಮದ್ದು: ಜಿಲ್ಲೆಯಲ್ಲಿ ಈತನಕ ಹಲವರನ್ನು ತಪಾಸಣೆ ಕೈಗೊಂಡಿದ್ದರೂ ಯಾರಿಗೂ ಕರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಹೀಗಾಗಿ ಹಾವೇರಿ ಜಿಲ್ಲೆ ಸದ್ಯದ ಮಟ್ಟಿಗೆ ಸೇಫರ್ ಜೋನ್ನಲ್ಲಿದೆ. ಪಕ್ಕದ ದಾವಣಗೆರೆ, ಧಾರವಾಡ ಜಿಲ್ಲೆಯಲ್ಲಿ ಪಾಸಿಟವ್ ಪ್ರಕರಣ ಕಂಡುಬಂದಿದ್ದರಿಂದ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಹೊರ ಜಿಲ್ಲೆಯಿಂದ ಬರುವವರನ್ನು ಸೂಕ್ತ ತಪಾಸಣೆ ನಡೆಸಿಯೇ ಬಿಡಲಾಗುತ್ತಿತ್ತು. ಹೀಗಾಗಿ ಹಾವೇರಿ ಜಿಲ್ಲೆ ಕರೊನಾ ಮುಕ್ತವಾಗಿದೆ. ಆದರೆ, ಇತ್ತೀಚೆಗೆ ಕೆಲ ತಾಲೂಕುಗಳಲ್ಲಿ ಲಾಕ್ಡೌನ್ ನಿಮಯ ಮುರಿದು ರಾಜಾರೋಷವಾಗಿ ತಿರುಗುತ್ತಿರುವುದು ಪ್ರಜ್ಞಾವಂತರಲ್ಲಿ ಭಯ ಹುಟ್ಟಿಸಿದೆ. ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಮೈಮರೆಯದೇ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕಿದೆ.
ಭಯ ಹುಟ್ಟಿಸುವ ಮುಸುಕುಧಾರಿಯರು…!: ರಾಣೆಬೆನ್ನೂರಿನ ಪಿ.ಬಿ. ರಸ್ತೆ, ಮೃತ್ಯುಂಜಯ ನಗರ, ಎನ್.ವಿ. ಹೋಟೆಲ್, ಗತಿಬ್ಗಲ್ಲಿ, ಇಸ್ಲಾಂಪುರ ಓಣಿ ಸೇರಿ ವಿವಿಧೆಡೆ ರಾತ್ರಿ 11 ಗಂಟೆಯಾದರೂ ಮುಸುಕುಧಾರಿಯರು ವಾಯುವಿಹಾರ ಮಾಡುತ್ತಿದ್ದಾರೆ. ಇವರ ಓಡಾಟ, ಗುಸುಗುಸು ಮಾತುಗಳು ಇತರರಲ್ಲಿ ಭಯ ಹುಟ್ಟಿಸುತ್ತಿವೆ. ಆದ್ದರಿಂದ ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಪೊಲೀಸರು ಹೆಚ್ಚಿನ ಗಸ್ತು ತಿರುಗುವ ಮೂಲಕ ಮುಸುಕುಧಾರಿಯರನ್ನು ರಸ್ತೆಗೆ ಇಳಿಯದಂತೆ ತಡೆಯಬೇಕಿದೆ ಎಂದು ಮೃತ್ಯುಂಜಯ ನಗರ ನಿವಾಸಿ ಸಾಗರ ಎಂ. ಎಂಬುವರು ಒತ್ತಾಯಿಸಿದ್ದಾರೆ.
ಲಾಕ್ಡೌನ್ ಮಧ್ಯೆಯೂ ಬೈಕ್ಗಳ ಮೇಲೆ ಮೂರು ಜನ ಓಡಾಡುತ್ತಿದ್ದಾರೆ. ಇಂಥವರ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಹಸಿರುವಲಯದಲ್ಲಿರುವ ಹಾವೇರಿ ಜಿಲ್ಲೆ ಕೆಂಪು ವಲಯವಾಗಿ ಮಾರ್ಪಡಲಿದೆ. | ಚೇತನ್ ಎಚ್., ಸ್ಥಳೀಯ ನಿವಾಸಿ
ದೇವರ ದಯೆಯಿಂದ ಜಿಲ್ಲೆಯಲ್ಲಿ ಸದ್ಯ ಯಾವುದೇ ಕರೊನಾ ಸೋಂಕಿತರು ಕಂಡು ಬಂದಿಲ್ಲ. ಹಾಗಂತ ಜನತೆ ಅನವಶ್ಯಕವಾಗಿ ಹೊರಗಡೆ ತಿರುಗಾಡುವುದು ಸೂಕ್ತವಲ್ಲ. ಮುಂಜಾಗ್ರತೆವಹಿಸಿ ಮನೆಯಲ್ಲಿಯೇ ಇರಬೇಕು. ಅನವಶ್ಯಕವಾಗಿ ಓಡಾಡುವವರ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ಸೂಚಿಸಲಾಗುವುದು. | ಅರುಣಕುಮಾರ ಪೂಜಾರ, ಶಾಸಕ
126 ಜನರ ಗಂಟಲ ಮಾದರಿ ಪರೀಕ್ಷೆಗೆ: ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದ 64 ಜನರ ಪರೀಕ್ಷಾ ಮಾದರಿಗಳು ನೆಗೆಟಿವ್ ಬಂದಿದ್ದು, ಸೋಮವಾರ ಮತ್ತೆ 126 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.
ಈವರೆಗೂ ಒಟ್ಟು 551 ಜನರ ರಕ್ತ, ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 346 ಮಾದರಿಗಳು ನೆಗೆಟಿವ್ ಬಂದಿದ್ದು, ಉಳಿದ 205 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. ಕರೊನಾ ಲಕ್ಷಣಗಳ ಆಧಾರದ ಮೇಲೆ ಸರ್ಕಾರಿ ಕ್ವಾರಂಟೈನ್ನಲ್ಲಿ 32 ಜನರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಶಂಕಿತ ಲಕ್ಷಣಗಳುಳ್ಳ ಒಟ್ಟು 219 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು ಇವರಲ್ಲಿ 208 ಜನರ 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ. ಉಳಿದ 11 ಜನರು ಕ್ವಾರಂಟೈನ್ನಲ್ಲಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಯಾರಲ್ಲೂ ಕರೊನಾ ಸೋಂಕು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಆಡೂರಿನ 21 ಜನರ ವರದಿ ಬಂದಿಲ್ಲ: ವಿಜಯಪುರದಲ್ಲಿ ಪತ್ತೆಯಾಗಿರುವ ರೋಗಿ ನಂಬರ್ 306 ಹಾಗೂ 308 ಜಿಲ್ಲೆಯ ಹಾನಗಲ್ಲ ತಾಲೂಕಿನ ಆಡೂರು ಗ್ರಾಮಕ್ಕೆ ಬಂದು ಹೋಗಿದ್ದ ಹಿನ್ನೆಲೆಯಲ್ಲಿ 21 ಜನರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಲ್ಯಾಬ್ಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಸೋಮವಾರ ಬಂದಿಲ್ಲ ಎಂದು ಡಿಎಚ್ಒ ತಿಳಿಸಿದ್ದಾರೆ.