ಹೊಳೆನರಸೀಪುರ: ಬೆಸ್ಕಾಂನಲ್ಲಿ ಇಂಜಿನಿಯರ್ ಆಗಿದ್ದ ತಾಲೂಕಿನ ಹೊನ್ನಾವರ ಗ್ರಾಮದ ಪಟ್ಟಾಭಿಗೌಡ ಅವರು ನಿವೃತ್ತಿ ನಂತರ ಕೃಷಿಯತ್ತ ಮುಖ ಮಾಡಿದ್ದು, ಮಿಶ್ರ ಬೇಸಾಯ ಪದ್ಧತಿಯಡಿ ತೆಂಗು, ಅಡಕೆ ಸೇರಿದಂತೆ ಹತ್ತಾರು ಬೆಳೆಗಳನ್ನು ಬೆಳೆಯುವ ಮೂಲಕ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.
ನಿವೃತ್ತಿ ಬಳಿಕ ಪಟ್ಟಾಭಿಗೌಡ ಅವರು ಹೊನ್ನಾವರ ಗ್ರಾಮದ ಸಮೀಪ 27 ಎಕರೆ ಭೂಮಿಯನ್ನು ಖರೀದಿಸಿ ತೆಂಗು, ಅಡಕೆ, ಕೋಕೋ, ಜಂಬುನೇರಳೆ, ಸಪೋಟ, ನಿಂಬೆ, ಬಟನ್ ರೋಜ್, ಗೆಣಸು, ಬಾಳೆ, ತೇಗಾ, ಮಹಾಗನಿ ಹೀಗೆ ಹತ್ತಾರು ವಿಧ ವಿಧವಾದ ಗಿಡ, ಮರಗಳನ್ನು ಬೆಳೆಸಿದ್ದಾರೆ. 74ರ ಹರೆಯದ ಪಟ್ಟಾಭಿಗೌಡ ದಂಪತಿ ತೋಟದ ಮನೆಯಲ್ಲೇ ನೆಲೆಸಿದ್ದು, ತೋಟದ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅವರಲ್ಲಿನ ಕೃಷಿ ಪ್ರೀತಿ ಸ್ವಲ್ಪವೂ ಕುಗ್ಗಿಲ್ಲ. ಕೈ ಕೆಸರಾದರೆ ಬಾಯಿ ಮೊಸರು ಎಂಬ ನಾಣ್ನುಡಿಯಂತೆ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅದರಲ್ಲಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.
12 ಎಕರೆ ಭೂಮಿಯಲ್ಲಿ 600 ಅಡಕೆ, ಉಳಿದ ಜಮೀನಿನಲ್ಲಿ 650 ತೆಂಗಿನ ಗಿಡ, 1000 ಕೋಕೋ ಗಿಡ, 1000 ಬಟನ್ ರೋಜ್, 200 ಜಂಬುನೇರಳೆ ಸಸಿ, 200 ಸಪೋಟ ಗಿಡಗಳನ್ನು ಬೆಳೆಸಿದ್ದಾರೆ. ಇಲ್ಲಿನ ವಿವಿಧ ಬೆಳೆಗಳು ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ತಂದುಕೊಡುತ್ತಿದೆ.
ಉಬ್ಬು ತಗ್ಗಿನಿಂದ ಕೂಡಿದ್ದ ಭೂಮಿಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹದಗೊಳಿಸಿಕೊಂಡಿದ್ದಾರೆ. ಕಡಿಮೆ ಆಳುಗಳಿಂದ ಸುಲಭ ನಿರ್ವಹಣೆ ಮಾಡಲೆಂದು ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದಾರೆ. ತೋಟವನ್ನು ನಿರ್ವಹಣೆ ಮಾಡಲೆಂದು ಎರಡು ಕುಟುಂಬಗಳನ್ನು ನಿಯೋಜಿಸಿಕೊಂಡಿದ್ದಾರೆ.
ಹನಿ ನೀರಾವರಿ ವ್ಯವಸ್ಥೆ: 27 ಎಕರೆ ಜಮೀನಿಗೆ ನೀರಿನ ಸೌಲಭ್ಯಕ್ಕಾಗಿ ಮೂರು ಬೋರ್‌ವೆಲ್‌ಗಳು, ಒಂದು ತೆರೆದ ಬಾವಿ ವ್ಯವಸ್ಥೆ ಇದೆ. ಬೇಸಿಗೆ ಕಾಲದಲ್ಲಿ ಮಾತ್ರ ನೀರಿನ ಅವಶ್ಯಕತೆ ಇದ್ದು, ತೋಟದ ಎಲ್ಲ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಏಕಕಾಲದಲ್ಲಿ ನೀರಿನ ಸರಬರಾಜು ಮಾಡಲೆಂದೇ ಡ್ರಿಪ್ ವೆಂಚರ್ ಅಳವಡಿಕೆಯ ವಿಧಾನವನ್ನು ಕಂಡುಕೊಂಡಿದ್ದಾರೆ. ಈ ಸೌಲಭ್ಯದಿಂದ ಏಕಕಾಲದಲ್ಲಿ ಎಲ್ಲ ಗಿಡಗಳಿಗೂ ನೀರು ಸರಬರಾಜು ಆಗುತ್ತದೆ.
ಗೊಬ್ಬರ ತಯಾರು: ಗೊಬ್ಬರಕ್ಕಾಗಿ ತೋಟದಲ್ಲಿ ಚಿಕ್ಕ ಚಿಕ್ಕ ಮಡಿಗಳನ್ನು ತೋಡಿ ಅದರೊಳಗೆ ತೆಂಗಿನ ಗರಿಗಳನ್ನು ಹಾಕಿ ಮಣ್ಣು ಮುಚ್ಚುವ ಮೂಲಕ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಬೆಳೆಗಳಿಗೆ ಅವಶ್ಯಕವಾಗಿ ಬೇಕಾಗುವಂತಹ ರಾಸಾಯನಿಕ ಗೊಬ್ಬರ ಹಾಗೂ ಸಸ್ಯ ಸಂರಕ್ಷಣೆಗಾಗಿ ಔಷಧೋಪಚಾರ ವಿಧಾನವನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಒಂದೇ ರೀತಿಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಕೈ ಸುಟ್ಟುಕೊಳ್ಳುವುದಕ್ಕಿಂತ ಈ ರೀತಿ ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಗತಿಪರ ರೈತ ಎನಿಸಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆಯುವುದರ ಜತೆಗೆ ತೋಟವನ್ನು ಅಭಿವೃದ್ಧಿಪಡಿಸುತ್ತಿರುವ ವಿಧಾನ ಇತರ ರೈತ ಸಮುದಾಯಕ್ಕೆ ಮಾದರಿಯಂತಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಅಲ್ಪ ಪ್ರಮಾಣದ ಸಹಾಯವನ್ನು ಪಡೆಯುವ ಮೂಲಕ ತೋಟವನ್ನು ನಿರ್ವಹಣೆ ಮಾಡುತ್ತಿದ್ದಾರೆ.