ಕಲಘಟಗಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಬೇಡ್ತಿ ಹಳ್ಳದ ಮೇಲ್ಸೇತುವೆಯ ತಳಪಾಯ ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ಜನರು ಅಂಗೈಯಲ್ಲಿ ಜೀವ ಹಿಡಿದುಕೊಂಡೇ ಸಾಗಬೇಕಾದ ಸ್ಥಿತಿ ನಿರ್ವಣವಾಗಿದೆ.
ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಚಾಪುರ ಗ್ರಾಮದ ಸನಿಹದಲ್ಲಿರುವ ಬೇಡ್ತಿ ಹಳ್ಳದ ಮೇಲ್ಸೇತುವೆ 1972ರಲ್ಲಿ ಉದ್ಘಾಟನೆಗೊಂಡಿದೆ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಮೇಲ್ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ನೀರಿನ ರಭಸಕ್ಕೆ ಅಡಿಪಾಯ ತೆರೆದುಕೊಂಡು ಸೇತುವೆಯು ಅಭದ್ರವಾಗಿದೆ. ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿನ ಸ್ಲ್ಯಾಬ್ ಜಾಯಿಂಟ್, ಇಕ್ಕೆಲಗಳಲ್ಲಿ ಕೂಡುವ ರಸ್ತೆಯಲ್ಲೂ ಬಿರುಕು ಬಿಟ್ಟಿದೆ. ಇದರಿಂದಾಗಿ ಈ ಮಾರ್ಗವಾಗಿ ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕರಲ್ಲಿ ಜೀವ ಭೀತಿ ಆವರಿಸಿದೆ.
ತಾಲೂಕಿನಲ್ಲಿ ಹುಬ್ಬಳ್ಳಿ ದಿಕ್ಕಿನಿಂದ ಹರಿಯುವ ಶಾಲ್ಮಲಾ (ರ್ಕ) ಹಾಗೂ ಧಾರವಾಡ ದಿಕ್ಕಿನ ಬೇಡ್ತಿ ಎರಡೂ ಸಂಗೇದೇವರಕೊಪ್ಪದ ಬಳಿ ಸಂಗಮವಾಗಿ ಮುಂದೆ ಬೇಡ್ತಿಯಾಗಿ ಹರಿಯುತ್ತಿದೆ. ನೀರಸಾಗರ ಕೆರೆ ತುಂಬಿ ಹರಿದಲ್ಲಿ ಹಾಗೂ ಹುಬ್ಬಳ್ಳಿಯ ರ್ಕ ಹಳ್ಳದಲ್ಲಿ ನೀರಿನ ರಭಸ ಹೆಚ್ಚಾದಾಗ ಇಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ. ಅತಿವೃಷ್ಟಿ ಸಂಭವಿಸಿ 9 ತಿಂಗಳಾದರೂ ಶಿಥಿಲಾವಸ್ಥೆಯಲ್ಲಿರುವ ಈ ಸೇತುವೆ ದುರಸ್ತಿಗೆ ಸರ್ಕಾರ ಮುಂದಾಗಿಲ್ಲ. ಇದರಿಂದ ತಾಲೂಕು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಂರ್ಪಸುವ ಲೊಕೋಪಯೋಗಿ ಇಲಾಖೆಯ ಏಕಮೇವ ಮುಖ್ಯ ರಸ್ತೆ ಇದಾಗಿದೆ. ತಾಲೂಕಿನ ಕೇಂದ್ರ ಸ್ಥಳದಿಂದ ಬೆಲವಂತರ, ತಾವರಗೆರೆ, ಆಲದಕಟ್ಟಿ, ಸೋಮನಕೊಪ್ಪ, ಹುಣಸಿಕಟ್ಟಿ, ಬಮ್ಮಿಗಟ್ಟಿ, ಮುಕ್ಕಲ್ಲ, ಆಸ್ತಕಟ್ಟಿ ನೆಲ್ಲಿಹರವಿ ಮೊದಲಾದ ಗ್ರಾಮಗಳಿಂದ ನಿತ್ಯ ಸಹಸ್ರಾರು ಜನರು ಸಂಚರಿಸುತ್ತಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ದುರಸ್ತಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
2019ರ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಹಳ್ಳದಲ್ಲಿ ನೀರು ಉಕ್ಕಿ ಹರಿದು ಜನ-ಜೀವನ ಅಸ್ತವ್ಯಸ್ತಗೊಂಡಿತು. ರಸ್ತೆಯಲ್ಲಿ ಬಿರುಕು ಬಿಟ್ಟಿತ್ತು. ಇದನ್ನು ಕಂಡ ಅಧಿಕಾರಿಗಳು ಇದುವರೆಗೂ ದುರಸ್ತಿಗೆ ಮುಂದಾಗದಿರುವುದು ವಿಪರ್ಯಾಸವಾಗಿದೆ.| ಸಣ್ಣದ್ಯಾಮಣ್ಣ ಜಮ್ಮಿಹಾಳ
ರೈತ, ಆಲದಕಟ್ಟಿ ಗ್ರಾಮ, ಕಲಘಟಗಿ ತಾಲೂಕು
ಇತ್ತೀಚಿನ ದಿನಗಳಲ್ಲಿ ರೈತರು ಕಬ್ಬು ಬೆಳೆಗೆ ಅವಲಂಬಿತರಾಗಿದ್ದಾರೆ. ಬಿರುಕು ಬಿಟ್ಟಿರುವ ಈ ಮೇಲ್ಸೇತುವೆಯಲ್ಲಿ ಕಟಾವು ಮಾಡಿದ ಕಬ್ಬು ಸಾಗಿಸುವಾಗ ಲಾರಿಯನ್ನು ಭಯದಲ್ಲಿಯೇ ಕೊಂಡೊಯ್ಯಬೇಕಾದ ಅನಿವಾರ್ಯತೆ ಉಂಟಾಗಿದೆ.| ನೀಲಪ್ಪ ಬ್ಯಾಹಟ್ಟಿ, ಚಾಲಕ
ಸೇತುವೆಯ ತಳಪಾಯ ಭದ್ರಗೊಳಿಸುವುದು ಅವಶ್ಯಕವಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರ್ಕಾರದಿಂದ ಮಂಜೂರಾತಿ ದೊರಕುತ್ತಿದ್ದಂತೆಯೇ ಕಾಮಗಾರಿ ಕೈಗೊಳ್ಳಲಾಗುವುದು.| ಬಿ.ಎಂ. ಬಾಗೇವಾಡಿಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ