ಸಿಂಧನೂರು: ಮುಖ್ಯಶಿಕ್ಷಕರಿಗೆ ಮೊಟ್ಟೆ ಖರೀದಿಯಿಂದ ವಿನಾಯಿತಿ ನೀಡಬೇಕು. ಹಾಲಿನ ಪುಡಿ ಮತ್ತು ರಾಗಿ ಮಾಲ್ಟ್ ಅನ್ನು ತ್ವರಿತವಾಗಿ ಶಾಲೆಗಳಿಗೆ ಪೂರೈಕೆ ಮಾಡುವಂತೆ ಒತ್ತಾಯಿಸಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪಗೆ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಪಿಎಂ ಪೋಷಣ್ ಅಭಿಯಾನದಡಿ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಕೆಗೆ ಬೇಕಾಗುವ ಸಾದಿಲ್ವಾರು ಹಣ ಸಾಕಾಗುತ್ತಿಲ್ಲ. ಮೊಟ್ಟೆ ಬೆಲೆ ದಿನೇ ದಿನೆ ಏರಿಕೆಯಾಗುತ್ತಿರುವುದರಿಂದ ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಸಾಗಣೆ ವೆಚ್ಚ ಸೇರಿ ಆರು ರೂಪಾಯಿ ನೀಡಲಾಗುತ್ತಿದ್ದು, 7 ರೂ.ಗೆ ಖರೀದಿ ಮಾಡಿ ಮಕ್ಕಳಿಗೆ ವಿತರಿಸುವ ಸ್ಥಿತಿ ಇದೆ ಎಂದು ದೂರಿದರು.
ಇಲಾಖೆಯಿಂದಲೇ ಮೊಟ್ಟೆ ಖರೀದಿಸಿ ಸರಬರಾಜು ಮಾಡಬೇಕು. ಅಜೀಂ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ನೀಡುತ್ತಿರುವ ಅನುದಾನದಲ್ಲಿ ಜಿಎಸ್‌ಟಿ ವಿನಾಯಿತಿ ನೀಡಿ ಕೆಲವು ದಾಖಲೆಗಳನ್ನು ಸರಳೀಕರಣಗೊಳಿಸಬೇಕು. ತೊಗರಿ ಬೇಳೆ ಮತ್ತು ಅಡುಗೆ ಎಣ್ಣೆ ಬೇಡಿಕೆಗೆ ಅನುಗುಣವಾಗಿ ಪೂರೈಸಬೇಕು. ನಿಯಮಿತವಾಗಿ ಸಾದಿಲ್ವಾರು ಹಣ ಜಮಾ ಮಾಡಬೇಕು. ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿಗೆ ಹಣ ಜಮಾ ಮಾಡಬೇಕೆಂದು ಒತ್ತಾಯಿಸಲಾಯಿತು.
ಪ್ರಮುಖರಾದ ಪ್ರಭಾಕರ ಕುಲಕರ್ಣಿ, ಪ್ರಕಾಶ ದಲಭಂಜನ, ಹನುಮಂತಪ್ಪ, ವಿರೂಪಾಕ್ಷಪ್ಪ ಮುಳ್ಳೂರು, ಬಾಲಕೃಷ್ಣ, ರಾಜೇಂದ್ರಕುಮಾರ, ಶಂಕರದೇವರು ಹಿರೇಮಠ, ಬಸವರಾಜ ಬಿರಾದಾರ ಇತರರಿದ್ದರು.