ಮೈಸೂರು: ಇಲವಾಲ ಹೋಬಳಿಯ ಡಿಎಂಜಿ ಹಳ್ಳಿಯಲ್ಲಿ ಗುರುವಾರ ಪ್ರಜ್ಞ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಣ್ಣಿನ ಪೊರೆ ತಪಾಸಣೆ ಹಾಗೂ ಚಿಕಿತ್ಸಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು.
ಪ್ರಜ್ಞ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಗೌರವಾಧ್ಯಕ್ಷ ಜಿ.ವಿ.ಪ್ರಸಾದ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ನೇತ್ರದಾನ ಮಹಾದಾನವಾಗಿದ್ದು, ದೃಷ್ಟಿ ಇಲ್ಲದವರಿಗೆ ದೃಷ್ಟಿ ನೀಡಿ ಜಗತ್ತನ್ನು ಕಾಣುವಂತೆ ಮಾಡುವುದೆ ಸರ್ವ ಶ್ರೇಷ್ಠವಾದ ಕೆಲಸ. ಇದನ್ನು ನಾವೆಲ್ಲರು ಅರಿತು ಮಾಡಬೇಕು. ನಾವು ಮೃತರಾದ ನಂತರ ನಮ್ಮ ನೇತ್ರಗಳನ್ನು ದಾನ ಮಾಡಬೇಕು ಎಂದರು.
ಟ್ರಸ್ಟ್‌ನ ಉಪಾಧ್ಯಕ್ಷ ಡಿ.ಬಿ.ಶಂಕರ್ ಮಾತನಾಡಿ, ಸಮಾಜದಲ್ಲಿ ಇಂದು ಸ್ವಾರ್ಥ ಹೆಚ್ಚುತ್ತಿದ್ದು, ಸೇವಾ ಮನೋಭಾವ ಕಡಿಮೆಯಾಗುತ್ತಿದೆ. ಕೈಲಾದ ಸಹಾಯ, ಸಹಕಾರವನ್ನು ಸಮಾಜಕ್ಕೆ ನೀಡಬೇಕು. ನಾವು ಎಷ್ಟು ದಿನ ಬದುಕಿದ್ದೇವೆ ಅನ್ನುವುದಕ್ಕಿಂತ ಹೇಗೆ ಮಾದರಿಯಾಗಿ ಬದುಕನ್ನು ನಡೆಸಿದ್ದೇವೆ ಎಂಬುದು ಬಹಳ ಮುಖ್ಯ ಎಂದು ಹೇಳಿದರು.
ಮೈಸೂರು ರೇಸ್ ಕ್ಲಬ್‌ನ ಸಂಯೋಜಕ ರಾಮು, ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರುಕ್ಮಾಂಗದ, ಕಾರ್ಯದರ್ಶಿ ಡಿ.ಸಿ.ಕುಮಾರ್, ಲೆಕ್ಕಾಧಿಕಾರಿ ಸಿದ್ದಪ್ಪ ಬೆಕ್ಕಣ್ಣನವರ್, ಮಾಜಿ ಅಧ್ಯಕ್ಷೆ ನೇತ್ರಾವತಿ, ಮಾಜಿ ಸದಸ್ಯರಾದ ನಾಗರಾಜು, ಜಿ.ಪುಟ್ಟೇಗೌಡ, ಟ್ರಸ್ಟ್‌ನ ನಿರ್ದೇಶಕ ಅನಿಲ್ ಹಾಗೂ ಇತರರು ಇದ್ದರು.