ಜಿಲ್ಲೆ

ಇರ್ವಿನ್ ರಸ್ತೆ ಮಸೀದಿ ತಡೆಗೋಡೆ ತೆರವು

  • ರಸ್ತೆ ವಿಸ್ತರಣೆಗೆ ಇದ್ದ ತೊಡಕು ನಿವಾರಿಸಿದ ಹೈಕೋರ್ಟ್
  • ಸಂಚಾರ ದಟ್ಟಣೆ ಸಮಸ್ಯೆ ಶೀಘ್ರದಲ್ಲಿಯೇ ಮುಕ್ತಿ

ಸದೇಶ್ ಕಾರ್ಮಾಡ್ ಮೈಸೂರು
ನಗರದ ಇರ್ವಿನ್ ರಸ್ತೆಯ ಸಂಚಾರ ದಟ್ಟಣೆ ಸಮಸ್ಯೆಗೆ ಶೀಘ್ರದಲ್ಲಿಯೇ ಮುಕ್ತಿ ದೊರೆಯಲಿದ್ದು, ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದ ಮಸೀದಿಯ ತಡೆಗೋಡೆ ತೆರವು ಕಾರ್ಯಾಚರಣೆಗೆ ಹೈಕೋರ್ಟ್ ನಿರ್ದೇಶನ ಮೇರೆಗೆ ಚಾಲನೆ ದೊರೆತ್ತಿದೆ.

ರಸ್ತೆ ವಿಸ್ತರಣೆ ಕಾಮಗಾರಿಗೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ 25-12-2018ರಂದು ಚಾಲನೆ ನೀಡಿದ್ದರು. ಈ ರಸ್ತೆಯ ಎಲ್ಲ ಭಾಗಗಳಲ್ಲೂ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾರ್ಯ ಸುಸೂತ್ರವಾಗಿ ನಡೆಯಿತು. ಆದರೆ, ಮಸೀದಿ ತಡೆಗೋಡೆ ತೆರವಿಗೆ ಅಡ್ಡಿ ಎದುರಾದ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಎರಡು ವಾರಗಳ ಹಿಂದೆ ಹೈಕೋರ್ಟ್ ಮಸೀದಿ ತಡೆಗೋಡೆ ತೆರವಿಗೆ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇದೀಗ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಎರಡು ಮೂರು ದಿನಗಳ ಒಳಗೆ ತೆರವು ಕಾರ್ಯಾಚರಣೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದಾದ ನಂತರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಗರ ಪಾಲಿಕೆ ಉದ್ದೇಶಿದೆ.

ಈ ರಸ್ತೆಯ ಮತ್ತೊಂದು ಬದಿಯಲ್ಲಿ ಖಾಸಗಿ ಕಟ್ಟಡವೊಂದು ತೆರವಿಗೆ ಬಾಕಿ ಇದೆ. ಈ ಕಟ್ಟಡ ಖಾತೆ ವಿಚಾರ ಗೊಂದಲದಲ್ಲಿ ಇರುವ ಹಿನ್ನೆಲೆಯಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ಸಾಧ್ಯವಾಗಲಿಲ್ಲ. ಸದ್ಯದಲ್ಲಿಯೇ ಆ ಕಟ್ಟಡಕ್ಕೆ ಸಂಬಂಧಿಸಿದವರನ್ನು ನಗರ ಪಾಲಿಕೆಗೆ ಕರೆಯಿಸಿ ಮಾತುಕತೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕಟ್ಟಡವೂ ತೆರವುಗೊಂಡರೆ ಇರ್ವಿನ್ ರಸ್ತೆಯ ವಿಸ್ತರಣೆ ಕಾರ್ಯ ಸಂಪೂರ್ಣಗೊಳ್ಳಲಿದೆ.

ಇರ್ವಿನ್ ರಸ್ತೆ ನಗರದ ಹೃದಯ ಭಾಗದಲ್ಲಿ ಇದ್ದು, ಸದಾ ವಾಹನ ದಟ್ಟಣೆ ಕಂಡು ಬರುತ್ತದೆ. ಈ ಮಾರ್ಗದ ಸುತ್ತಮುತ್ತ ಗ್ರಾಮಾಂತರ ಬಸ್ ನಿಲ್ದಾಣ, ಕೆಆರ್ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ರೈಲ್ವೆ ನಿಲ್ದಾಣ ಇರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಸದಾ ಕಂಡು ಬಂದು ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಮಾಡಬೇಕೆಂಬ ಒತ್ತಾಯ ಸಾಕಷ್ಟು ವರ್ಷಗಳಿಂದ ಕೇಳಿ ಬರುತಿತ್ತು. ಆದರೆ, ಸಾಕಷ್ಟು ಭೂ ಮಾಲೀಕರು ಜಾಗ ನೀಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಹಾಗೂ ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಕೈಗತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, 2018ರಲ್ಲಿ ಬಹುತೇಕ ವ್ಯಾಜ್ಯಗಳನ್ನು ಬಗೆಹರಿಸಿ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣ ಬಳಿಯಿಂದ ನೆಹರು ವೃತ್ತದವರೆಗೆ ಹಾಗೂ ಆಯುರ್ವೇದ ವೃತ್ತದಿಂದ ರೈಲ್ವೆ ನಿಲ್ದಾಣ ವರೆಗಿನ ಇರ್ವಿನ್ ರಸ್ತೆಯನ್ನು ಹಲವು ವರ್ಷಗಳ ಹಿಂದೆಯೇ ವಿಸ್ತರಣೆ ಮಾಡಿ ನಾಲ್ಕುಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ನೆಹರು ವೃತ್ತದಿಂದ ಆಯುರ್ವೇದ ವೃತ್ತದವರೆಗೆ ರಸ್ತೆ ವಿಸ್ತರಣೆಯಾಗದೆ ವಾಹನ ಸವಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. 2018ರಲ್ಲಿ ನೆಹರು ವೃತ್ತದಿಂದ ಆಯುರ್ವೇದ ವೃತ್ತದವರೆಗೆ ರಸ್ತೆಯನ್ನು ವಿಸ್ತರಣೆ ಮಾಡಿದರೂ ಆ ಭಾಗದಲ್ಲಿದ್ದ ಮಸೀದಿಯ ತಡೆಗೋಡೆ ಹಾಗೂ ಖಾಸಗಿ ಕಟ್ಟಡವೊಂದನ್ನು ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.

ನಾಲ್ಕು ಪಥದ ರಸ್ತೆ: ನೆಹರು ವೃತ್ತದಿಂದ ಆಯುರ್ವೇದ ವೃತ್ತದವರೆಗೂ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆಯ ಮಧ್ಯ ಭಾಗದಿಂದ ಎರಡು ಕಡೆ ತಲಾ 9 ಮೀಟರ್ ವಿಸ್ತರಣೆಯಾಗಿದೆ. ಈ ಪೈಕಿ ತಲಾ 7.5 ಮೀಟರ್ ರಸ್ತೆ, 1.2 ವಿಸ್ತೀರ್ಣದ ಫುಟ್‌ಪಾತ್ ನಿರ್ಮಾಣ ಮಾಡಲಾಗಿದ್ದು, ಮಧ್ಯದಲ್ಲಿ ರಸ್ತೆ ವಿಭಜಕ ಅಳವಡಿಸಲಾಗಿದೆ. ರಸ್ತೆ ನಿರ್ಮಾಣ, ಒಳಚರಂಡಿ, ವಿದ್ಯುತ್ ಮಾರ್ಗಗಳ ಬದಲಾವಣೆಗೆ ಒಟ್ಟು 4.5 ಕೋಟಿ ರೂ. ವಿನಿಯೋಗಿಸಲಾಗಿದ್ದು, ಕಟ್ಟಡ ತೆರವು ಕಾರ್ಯಾಚರಣೆಗೆ 33.22 ಲಕ್ಷ ರೂ. ವಿನಿಯೋಗಿಸಲಾಗಿದೆ.

ಗರಿಷ್ಠ ಪ್ರಮಾಣದ ಪರಿಹಾರ: ಪ್ರಾರಂಭದಲ್ಲಿ ರಸ್ತೆ ವಿಸ್ತರಣೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ನಂತರ ಜಿಲ್ಲಾಡಳಿತ ಜಾಗದ ಮಾಲೀಕರ ಮನವೊಲಿಸಿ ಗರಿಷ್ಠ ಪ್ರಮಾಣದ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ಮಾಲೀಕರು ರಸ್ತೆ ವಿಸ್ತರಣೆಗೆ ಸಮ್ಮತಿ ವ್ಯಕ್ತಪಡಿಸಿದರು. ಒಟ್ಟು 25,823.94 ಚದರ ಅಡಿ ವಿಸ್ತರಣೆಯಾಗಿದ್ದು, ಒಟ್ಟು 86 ಮಾಲೀಕರು ಆಸ್ತಿ ಹೊಂದಿದ್ದರು. ಈಗಾಗಲೇ 86 ಕಟ್ಟಡಗಳ ಪೈಕಿ 84 ಕಟ್ಟಡಗಳನ್ನು ನೆಲಸಮ ಮಾಡಲಾಗಿದ್ದು, ಮಸೀದಿ ತಡೆಗೋಡೆ ಹಾಗೂ ಖಾಸಗಿ ಕಟ್ಟಡ ತೆರವು ಕಾರ್ಯಾಚರಣೆ ಮಾತ್ರ ಬಾಕಿ ಇತ್ತು.


ಇರ್ವಿನ್ ರಸ್ತೆಯಲ್ಲಿರುವ ಮಸೀದಿ ತಡೆಗೋಡೆ ತೆರವಿಗೆ ಎರಡು ವಾರಗಳ ಹಿಂದೆ ಹೈಕೋರ್ಟ್ ನಿರ್ದೇಶ ನೀಡಿದೆ. ಆ ಹಿನ್ನೆಲೆಯಲ್ಲಿ ಇದೀಗ ಮಸೀದಿ ಆಡಳಿತ ಮಂಡಳಿಯಿಂದ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಒಂದೆರಡು ದಿನಗಳ ಒಳಗೆ ಈ ತೆರವು ಕಾರ್ಯಾಚಣೆ ಪೂರ್ಣಗೊಳ್ಳಲಿದೆ. ಅದಾದ ನಂತರ ಇರ್ವಿನ್ ರಸ್ತೆಯಲ್ಲಿರುವ ಮತ್ತೊಂದು ಖಾಸಗಿ ಕಟ್ಟಡದ ತೆರವು ಕಾರ್ಯಾಚರಣೆಗೆ ಕಟ್ಟಡಕ್ಕೆ ಸಂಬಂಧಿಸಿದವರನ್ನು ಕರೆದು ಮಾತುಕತೆ ನಡೆಸಲಾಗುವುದು. ಕಟ್ಟಡ ಮಾಲೀಕರ ಒಪ್ಪಿಗೆ ಪಡೆದು ಶೀಘ್ರದಲ್ಲಿಯೇ ಕಟ್ಟಡವನ್ನು ತೆರವುಗೊಳಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು.

ಲಕ್ಷ್ಮೀಕಾಂತ್ ರೆಡ್ಡಿ, ಪಾಲಿಕೆ ಆಯುಕ್ತ