ಹುಬ್ಬಳ್ಳಿ: ಮಗನ ಮದುವೆ ದಿನವೇ ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ (48) ಮೇಲೆ ನಾಲ್ವರು ಅಪರಿಚಿತರ ಗುಂಪು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ಹಳೇ ಹುಬ್ಬಳ್ಳಿ ದೇವರಗುಡಿಹಾಳ ರಸ್ತೆಯ ಅಲ್ ತಾಜ್ ರೆಸ್ಟೋರೆಂಟ್ ಎದುರು ಗುರುವಾರ ಸಂಜೆ ನಡೆದಿದೆ.
ಹಳೇ ಹುಬ್ಬಳ್ಳಿಯ ಅಲ್ತಾಫ್ ಎಂಬುವರ ಪುತ್ರಿಯ ಜತೆಗೆ ಇರ್ಫಾನ್ ಪುತ್ರನ ಮದುವೆ ಅಲ್ ತಾಜ್ ಹೋಟೆಲ್ ಸಭಾಭವನದಲ್ಲಿ ಗುರುವಾರ ನಿಗದಿಯಾಗಿತ್ತು. ಮದುವೆ ಸಮಾರಂಭದ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಇರ್ಫಾನ್ ಮೆಟ್ಟಿಲಿಳಿದು ರಸ್ತೆಗೆ ಬಂದು ಕಾರಿನಲ್ಲಿ ಕುಳಿತುಕೊಳ್ಳುವುದರಲ್ಲಿದ್ದ. ಈ ವೇಳೆ ನಾಲ್ವರು ಅಪರಿಚಿತರು ಮೂರು ಪಿಸ್ತೂಲ್ಗಳಿಂದ 6 ಬಾರಿ ಗುಂಡು ಹಾರಿಸಿ ಬೈಕ್ ಏರಿ ಪರಾರಿಯಾದರು. ಇರ್ಫಾನ್ ಸ್ಥಳದಲ್ಲೇ ಕುಸಿದು ಬಿದ್ದನು. ತಲೆ ಹಾಗೂ ತೊಡೆಯ ಭಾಗಕ್ಕೆ ಗುಂಡು ತಗುಲಿ ರಕ್ತಸ್ರಾವವಾಗುತ್ತಿದ್ದ ಆತನನ್ನು ಕೂಡಲೇ ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಯಿತು.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಆಯುಕ್ತ ಆರ್. ದಿಲೀಪ, ಎಸಿಪಿ ಎಂ.ವಿ ಮಲ್ಲಾಪುರ ಹಾಗೂ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಒಂದು ಸಜೀವ (ಬಳಸಬಹುದಾಗಿದ್ದ) ಗುಂಡು ಸೇರಿ 2 ಗುಂಡುಗಳು ಸಿಕ್ಕಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಲ್ತಾಜ್ ಹೋಟೆಲ್ನ ಸಿಸಿಟಿವಿ ಕ್ಯಾಮರಾದಲ್ಲಿ ಶೂಟೌಟ್ನ ದೃಶ್ಯಗಳು ಸೆರೆಯಾಗಿವೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಗಡಿಪಾರಾಗಿದ್ದ: ಫ್ರೂಟ್ ಇರ್ಫಾನ್ ವಿರುದ್ಧ ಧಾರವಾಡದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಕೊಲೆ, ಭೂ ವಿವಾದ, ವಂಚನೆ ಮತ್ತಿತರ ಪ್ರಕರಣಗಳು ದಾಖಲಾಗಿವೆ. ಇರ್ಫಾನ್ನನ್ನು ಗಡಿಪಾರು ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದರು. ಗಡಿಪಾರು ಆದೇಶಕ್ಕೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಜಿಲ್ಲೆಗೆ ವಾಪಸಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಡ ಪಿಸ್ತೂಲ್ ಬಳಕೆ ?: ಕಪ್ಪು ಬಣ್ಣದ ಜರ್ಕಿನ್ ಧರಿಸಿದ್ದ ನಾಲ್ವರು ಯುವಕರ ಗುಂಪು ಕೃತ್ಯ ಎಸಗಿದೆ. ಬುಲೆಟ್ನಲ್ಲಿ ಇಬ್ಬರು ಬಂದಿದ್ದು, ಪಕ್ಕದಲ್ಲೇ ಮತ್ತಿಬ್ಬರು ಓಡಾಡಿಕೊಂಡಿದ್ದರು. ಬುಲೆಟ್ ಹತ್ತಿರ ಬರುತ್ತಿದ್ದಂತೆ ಮೂವರು ಪಿಸ್ತೂಲ್ ತೆಗೆದು ಇರ್ಫಾನ್ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೈದು, ಅಷ್ಟೇ ವೇಗದಲ್ಲಿ ಬೈಕ್ ಏರಿ ಪರಾರಿಯಾಗಿದ್ದಾರೆ. ಆರೋಪಿಗಳು ಬಳಸಿದ್ದು ನಾಡಪಿಸ್ತೂಲ್ ಇರಬಹುದು ಎನ್ನಲಾಗಿದೆ. ಆರೋಪಿಗಳು ಯಾರು? ಸ್ಥಳೀಯರೆ ಅಥವಾ ಹೊರಗಿನವರೆ? ಯಾವ ಕಾರಣಕ್ಕೆ ಗುಂಡು ಹಾರಿಸಿದರು ? ಆ ಪಿಸ್ತೂಲ್ಗಳಿಗೆ ಲೈಸೆನ್ಸ್ ಇದೆಯೆ ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.