ಚಿತ್ರದುರ್ಗ: ಕಳೆದ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ ಈ ವರ್ಷದ ಜಿಲ್ಲೆಯ ಸೆಕೆಂಡ್ ಪಿಯುಸಿ ಫಲಿತಾಂಶ ಕೊಂಚ ಎನ್ನುವಂತೆ ಸುಧಾರಣೆ ಕಂಡು ಬಂದಿದ್ದರೂ ವಿಶೇಷವಾಗಿ ಜಿಲ್ಲೆಯ 129 ಪದವಿ ಪೂರ್ವ ಕಾಲೇಜುಗಳ ಪೈಕಿ ಸರ್ಕಾರಿ, ಅನುದಾನಿತ ಕಾಲೇಜುಗಳ ಫಲಿತಾಂಶ ನಿರೀಕ್ಷಿತ ಮಟ್ಟಕ್ಕೆ ತಲುಪದೇ ಇರುವುದು ಪದವಿ ಪೂರ್ವ ಶಿಕ್ಷಣ ಇಲಾಖೆ ಆತಂಕಕ್ಕೆ ಕಾರಣವಾಗಿದೆ.
ಫಲಿತಾಂಶ ಸುಧಾರಣೆಗೆ 20 ಅಂಶಗಳನ್ನು ಒಳಗೊಂಡಂತೆ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಒಟ್ಟಾರೆ ಜಿಲ್ಲೆಯ ಫಲಿತಾಂಶ ಸುಧಾರಣೆ ಕಂಡು ಬಂದಿಲ್ಲದೇ ಇರುವುದು ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಇರಿಸು ಮುರಿಸು ತರಿಸಿದೆ.
ಜಿಲ್ಲೆಯಲ್ಲಿ 40 ಸರ್ಕಾರಿ ಕಾಲೇಜು, ಅನುದಾನಿತ 46 ಹಾಗೂ ಅನುದಾನ ರಹಿತ 43 ಕಾಲೇಜುಗಳಿವೆ. ಜಿಲ್ಲೆಯ 64 ಕಾಲೇಜುಗಳಲ್ಲಿ ಶೇ.50 ಮತ್ತು ಅದಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. 23 ಸರ್ಕಾರಿ ಕಾಲೇಜು, 35 ಅನುದಾನಿತ ಹಾಗೂ ಆರು ಅನುದಾನ ರಹಿತ ಕಾಲೇಜುಗಳಲ್ಲಿ ಶೇ.50 ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ.
ಶೇ.50ಕ್ಕಿಂತ ಅಧಿಕ ಫಲಿತಾಂಶವನ್ನು 13 ಸರ್ಕಾರಿ, 11 ಅನುದಾನಿತ ಹಾಗೂ 41 ಅನುದಾನ ರಹಿತ ಕಾಲೇಜುಗಳು ಪಡೆದಿವೆ. ಶೇ.100 ಫಲಿತಾಂಶ ಒಂದು ಕಾಲೇಜಿಗೆ, ಶೇ. 11ರಿಂದ 20ರವರೆಗೆ 5 ಹಾಗೂ ಒಂದು ಕಾಲೇಜಿಗೆ ಶೇ.8.3 ಫಲಿತಾಂಶ ಬಂದಿದೆ. ಯಾವ ಕಾಲೇಜಿಗೂ ಶೂನ್ಯ ಫಲಿತಾಂಶ ದಾಖಲಿಸದಿರುವುದು ಅಧಿಕಾರಿಗಳ ನಿಟ್ಟುಸಿರಿಗೆ ಕಾರಣವಾಗಿದೆ.
ಜಿಲ್ಲೆಯ ತಲಾ 30 ವಿದ್ಯಾರ್ಥಿಗಳು,ಕ್ರಮವಾಗಿ ಶೇ. 91.16ರಿಂದ ಶೇ.97.62ವರೆಗೆ ಅಂಕಗಳನ್ನು ಕಲಾವಿಭಾಗ, ವಾಣಿಜ್ಯದಲ್ಲಿ ಶೇ. 94.66ರಿಂದ ಶೇ. 98.66, ವಿಜ್ಞಾನ ವಿಭಾಗದಲ್ಲಿ ಶೇ.96.16ರಿಂದ ಶೇ.98.83ವರೆಗೆ ಅಂಕಗಳನ್ನು ಪಡೆದಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 13,426 ರೆಗ್ಯೂಲರ್ ವಿದ್ಯಾರ್ಥಿಗಳ ಪೈಕಿ 8038 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
----
ಸುಧಾರಣೆಗೆ ಕ್ರಮ
ಜಿಲ್ಲೆಯ ಫಲಿತಾಂಶದಲ್ಲಿ ಸುಧಾರಣೆಯಾಗಿದೆ ಎನ್ನುವಂತಿಲ್ಲ, ಇದೊಂದು ಕೆಟ್ಟ ಫಲಿತಾಂಶ. ಸರ್ಕಾರಿ ಕಾಲೇಜುಗಳಲ್ಲಿ ಮೆರಿಟ್ ಆಧರಿಸಿ ನೇಮಕವಾದ ಉಪನ್ಯಾಸಕರಿದ್ದರೂ ಕಡಿಮೆ ಬಂದಿರುವುದು ದುರಂತ. ಸರ್ಕಾರಿ ಹುದ್ದೆಗೆ ಸೇರಿದ ಬಳಿಕ ಕಂಪರ್ಟ್ಸ್ ರೆನ್‌ನಲ್ಲಿ ಉಪನ್ಯಾಸಕರು ಇರುವುದನ್ನು ಗಮನಿಸಿದ್ದೇನೆ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಇನ್ನೂ ಸುಧಾರಣೆಗೆಯಾಗಬೇಕಿದೆ. ಉ ಪನ್ಯಾಸಕರು ಬದ್ಧತೆ ಪ್ರದರ್ಶಿಸಬೇಕಿದೆ. ಹಿಂದುಳಿದ ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಕುಸಿಯುತ್ತಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಸುಧಾರಣೆಗೆ ಕ್ರಮ ವಹಿಸಲಾಗುವುದು.
ಟಿ. ವೆಂಕಟೇಶ್, ಜಿಲ್ಲಾಧಿಕಾರಿ
---