ಜಿಲ್ಲೆ

ಇರಾನಿ ಗ್ಯಾಂಗ್​ ಸರಗಳ್ಳರ ಬಂಧನ

ತುಮಕೂರು: ತಿಪಟೂರು, ಚಿಕ್ಕನಾಯಕನಹಳ್ಳಿಯಲ್ಲಿ ಕೈಚಳ ತೋರಿದ್ದ ಇರಾನಿ ಗ್ಯಾಂಗ್​ನ ಸರಗಳ್ಳರಿಬ್ಬರನ್ನು ತಿಪಟೂರು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ಪೂನಾದ ಇರಾನಿ ಗಲ್ಲಿಯ ಅಸ್ಗರ್​ ಅಲಿ ಹಾಗೂ ಹೈದರ್​ ಅಲಿ ಬಂಧಿತ ಆರೋಪಿಗಳು. ತಿಪಟೂರು ನಗರವಲ್ಲದೆ, ಚಿಕ್ಕನಾಯಕನಹಳ್ಳಿ ಪಟ್ಟಣ, ಹುಳಿಯಾರು ಹಾಗೂ ಚನ್ನಪಟ್ಟಣ ಸೇರಿ 5 ಕಡೆ ಸರಗಳ್ಳತನ ಮಾಡಿರುವುದನ್ನು ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಬಂಧಿತರಿಂದ 7 ಲಕ್ಷ ಮೌಲ್ಯದ 100 ಗ್ರಾಂ ಚಿನ್ನದ ಒಡವೆಗಳು ಹಾಗೂ ಪಲ್ಸರ್​ ಬೈಕ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆ: ಕಳೆದ ಅಕ್ಟೋಬರ್​ 17ರಂದು ಮಧ್ಯಾಹ್ನ 12ಕ್ಕೆ ತಿಪಟೂರು ನಗರದ ಮಂಜುಳಮ್ಮ ಗಾರ್ಡನ್​ ಏರಿಯಾದ ವೆಂಕಟಮ್ಮ ಎಂಬುವರು ಮನೆಕಡೆ ಹೋಗುತ್ತಿದ್ದ ವೇಳೆ ಬಜಾಜ್​ ಪಲ್ಸರ್​ ಬೈಕ್​ನಲ್ಲಿ ಬಂದ ಅಪರಿಚಿತರು ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದು, ಈ ವೇಳೆ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ತಿಪಟೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಪತ್ತೆಗೆ ತಿಪಟೂರು ಡಿವೈಎಸ್ಪಿ ವಿನಾಯಕ ಶೆಟಿಗೇರಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ತಂಡವು ಮಹಾರಾಷ್ಟ್ರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.