ಬಾಗಲಕೋಟೆ: ದೇಶಿ ಉಡುಪು ಧರಿಸಿ ಮಿಂಚುತ್ತಿದ್ದ ವಿದ್ಯಾರ್ಥಿಗಳು, ಕಣ್ಣಾಡಿಸಿದಲೆಲ್ಲ ಸೊಬಗಿನ ವೈಭವ. ಬಾಯಿ ಚಪ್ಪರಿಸುವಷ್ಟು ಬಗೆ ಬಗೆಯ ಜವಾರಿ ಖಾದ್ಯ…!!!
ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ದೃಶ್ಯಗಳು. ನಮ್ಮ ನಾಡಿನ ಸಾಂಸ್ಕೃತಿ, ಹಬ್ಬ ಹರಿದಿನಗಳ ಹೊಸ ಪೀಳಿಗೆ ಜನರು ಅರ್ಥಪೂರ್ಣವಾಗಿ ಆಚರಿಸಲಿ ಎನ್ನುವ ಕಾರಣಕ್ಕೆ ಕಾಲೇಜಿನಲ್ಲಿ ನಡೆದ ಸಂಕ್ರಾಂತಿ ಕಾರ್ಯಕ್ರಮ ವಿದ್ಯಾರ್ಥಿಗಳು-ಶಿಕ್ಷಕರಲ್ಲಿ ಸಂತಸ ಇಮ್ಮಡಿಗೊಳಿಸುವಂತೆ ಮಾಡಿತು.
ಕಾಲೇಜು ಒಳ-ಹೊರ ಆವರಣದಲ್ಲಿ ರಂಗೋಲಿ ಚಿತ್ತಾರ ಗಮನ ಸೆಳೆಯಿತು. ಸಾಂಪ್ರದಾಯಿಕ ಇಳಕಲ್ಲ ಸೀರೆ, ಪಂಚೆಯಲ್ಲಿ ವಿಂಚಿದ ವಿದ್ಯಾರ್ಥಿಗಳು ಜನಪದ ಹಾಡುಗಳಿಗೆ ಹೆಜ್ಜೆ ಹಾಕಿ ಆಕರ್ಷಿಸಿದರು. ಜವಾರಿ ಖಡಕ್ ರೊಟ್ಟಿ, ಕಡಬು, ಶೇಂಗಾ, ಗುರೇಳ್ಳ ಚೆಟ್ನಿ, ತುಂಬು ಬದನೆಕಾಯಿ ಪಲ್ಯ, ಹೆಸರು ಕಾಳು, ಹಿಟ್ಟಿನ ಪಲ್ಯೆ, ಸಜ್ಜಿ ರೊಟ್ಟಿ ಊಟ ಸವಿರುಚಿ ಹೆಚ್ಚಿಸಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಗನ್ನಾಥ ಚವ್ಹಾಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಡಾ.ಎಂ.ನಂಜುಂಡಸ್ವಾಮಿ, ಐಕ್ಯೂಎಸಿ ಸಂಯೋಜಕಿ ಜಿ.ಎಂ.ನಾವದಗಿ, ಸಾಂಸ್ಕೃತಿಕ ಚಟುವಟಿಕೆ ವಿಭಾಗದ ರಾಜು ಮೇಲಿನಮನಿ, ಎಂ.ಎಂ.ಹುದ್ದಾರ, ಕೆ.ಜೆ.ಮಳಜಿ, ಡಾ.ಐ.ಕೆ.ಮಠದ, ಜಿ.ಎಸ್.ಶೇಲ್ಲಿಕೇರಿ ಸೇರಿದಂತೆ ಇತರರು ಇದ್ದರು.