ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀ ಜಿ ಅವರ ದೀಕ್ಷಾ ರಜತ ಮಹೋತ್ಸವ ಸಮಾರಂಭ ಜು.18 ರಿಂದ 3 ದಿನಗಳ ಕಾಲ ಶ್ರೀ ಮಠದ ಆವರಣದಲ್ಲಿ ನಡೆಯಲಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರ‌್ಲಗುಂಟೆ ರಾಮಪ್ಪ, ಈ ಮಹೋತ್ಸವ ಭೋವಿ ಸಮುದಾಯದ ಜನೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಗುರುವಾರ ರಕ್ತದಾನ ಶಿಬಿರ ಹಾಗೂ ವನಮಹೋತ್ಸವವನ್ನು ಸಾಲುಮರದ ತಿಮ್ಮಕ್ಕ ಉದ್ಘಾಟಿಸಲಿದ್ದಾರೆ. 19ರಂದು ವಧು-ವರರ ಉಚಿತ ಸಮಾವೇಶ ಏರ್ಪಡಿಸಲಾಗಿದೆ. ಒಂದು ಸಾವಿರ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. 20ರಂದು ಪ್ರತಿಭಾಪುರಸ್ಕಾರ ಹಮ್ಮಿಕೊಳ್ಳಲಾಗಿದೆ.
ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು,ಪಿ.ಎಚ್‌ಡಿ ಪದವೀಧರರು, ಐಎಇ, ಐಪಿಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಸಚಿವ ಶಿವರಾಜ್ ಎಸ್.ತಂಗಡಗಿ, ಎಲ್ಲ ಪಕ್ಷಗಳ ಸಮುದಾಯದ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರು ಸೇರಿ ಅನೇಕ ಗಣ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಶ್ರೀಗಳು ನಾಡಿನಾದ್ಯಂತ ಸಂಚರಿಸಿ ಜನರನ್ನು ಆಹ್ವಾನಿಸಿದ್ದಾರೆ. ನಮ್ಮ ಸಮಾಜ ಸಂಘಟಿತವಾಗಿದೆ ಎಂಬ ಎಚ್ಚರಿಕೆ ಸಂದೇಶವನ್ನು ಸ ಮಾರಂಭದ ಮೂಲಕ ರಾಜಕೀಯ ಪಕ್ಷಗಳಿಗೆ ರವಾನಿಸುತ್ತಿದ್ದೇವೆ. ಅಂದಾಜು ಒಂದೂವರೆ ಲಕ್ಷ ಜನ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಭೋವಿ ಸಮುದಾಯ 35 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾಜದ ಏಳಿಗೆಗೆ ಶ್ರಮಿ ಸಲಾಗುತ್ತಿದೆ. ಈ ಕಾರ್ಯಕ್ರಮ ಜನಾಂದೋಲನದ ಸ್ವರೂಪ ಪಡೆಯಲಿದೆ ಎಂದು ತಿಳಿಸಿದರು.
ಭೋವಿ ಸಮುದಾಯದ ನಿಕಟಪೂರ್ವ ಅಧ್ಯಕ್ಷ ಡಿ. ತಿಮ್ಮಣ್ಣ ಮಾತನಾಡಿ, ಇಪ್ಪತ್ತು ವರ್ಷಗಳ ಹಿಂದೆ ಗುಡಿಸಲಿನಲ್ಲಿದ್ದ ಶ್ರೀ ಮಠ ಇಂದು ಅಭಿವೃದ್ಧಿ ಹೊಂದಿದೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಸಂಘಟನೆಯಲ್ಲಿ ಮುಖಂಡರಾದ ಮಂಜರಿ ಹನುಮಂತಪ್ಪ, ಮುನಿಸ್ವಾಮಿ ಮತ್ತಿತರರ ಶ್ರಮವಿದೆ ಎಂದರು.ಮುಖಂಡರಾದ ತಿಪ್ಪೇಸ್ವಾಮಿ, ಇ. ಮಂಜುನಾಥ್, ಎಚ್. ಲಕ್ಷ್ಮಣ್, ಗೌನಳ್ಳಿ ಗೋವಿಂದಪ್ಪ ಇದ್ದರು.
ಭಾಗವಹಿಸಲಿರುವ ಶ್ರೀಗಳು
ಮಂತ್ರಾಲಯ ಸುಬುಧೇಂದ್ರ ತೀರ್ಥ ಶ್ರೀ, ಕೊಪ್ಪಳ ಗವಿಸಿದ್ದೇಶ್ವರ ಶ್ರೀ, ನಿರಂಜನಾನಂದಪುರಿ ಶ್ರೀ, ಶಾಂತವೀರ ಶ್ರೀ, ಬಸವ ಜಯ ಮೃತ್ಯುಂಜಯ ಶ್ರೀ, ಪ್ರಸನ್ನ ವಾಲ್ಮೀಕಿ ಶ್ರೀ, ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ವಚನಾನಂದ ಶ್ರೀ, ಶಾಂತಭೀಷ್ಮ ಅಂಬಿಗರ ಚೌಡಯ್ಯ ಶ್ರೀ, ಪುರುಷೋತ್ತಮಾನಂದಪುರಿ ಶ್ರೀ, ಕೃಷ್ಣ ಯಾದವಾನಂದ ಶ್ರೀ, ಬಸವ ಮಾಚಿದೇವ ಶ್ರೀ, ರೇಣುಕಾನಂದ ಶ್ರೀ, ಅನ್ನದಾನಿ ಭಾರತೀ ಅಪ್ಪಣ್ಣ ಶ್ರೀ, ಕುಂಬಾರ ಗುಂಡಯ್ಯ ಶ್ರೀ, ವೇಮನಾನಂದ ಶ್ರೀ, ಇಮ್ಮಡಿ ಮೇದಾರ ಕೇತೇಶ್ವರ ಶ್ರೀ, ಈಶ್ವರಾನಂದಪುರಿ ಶ್ರೀ, ಸಿದ್ದರಾಮಯ್ಯನಂದಪುರಿ ಶ್ರೀ, ಶಿವಬಸವ ಶ್ರೀ, ಬಸವ ಪ್ರಸಾದ ಶ್ರೀ, ಮಹಾಲಿಂಗ ಶ್ರೀ, ನಾಗೇಂದ್ರ ಶ್ರೀ, ಬಸವಪ್ರಭು ಶ್ರೀ, ಮರಳುಸಿದ್ಧ ಶ್ರೀ, ಶ್ರೀ ಬಸವ ನವಲಿಂಗ ಶರಣರು, ಶಾಂತ ಮಲ್ಲಿಕಾರ್ಜುನ ಶ್ರೀ, ಶಾಂತಲಿಂಗ ಶ್ರೀ, ಜಯದೇವ ಶ್ರೀ, ಬಸವ ರಮಾನಂದ ಶ್ರೀ, ಚನ್ನಬಸವ ಶ್ರೀ, ಬಸವ ಲಿಂಗಮೂರ್ತಿ ಶ್ರೀ, ಮಹಾಂತ ಶ್ರೀ, ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, ಶಶಿಶೇಖರ ಸಿದ್ಧಬಸವ ಶ್ರೀ, ಮಾತೆ ಶ್ರೀ ಸತ್ಯಕ್ಕ, ಮಾತೆ ಶ್ರೀ ನೀಲಲೋಚನಾ, ಮಾತೆ ಶ್ರೀ ಚಿನ್ಮಯಿ, ಮಾತೆ ಶ್ರೀ ಬಸವಂಜಲಿ ಸೇರಿ 75ಕ್ಕೂ ಹೆಚ್ಚು ಮಠಾಧೀಶರು, ಸಾಧು-ಸಂತರು ಭಾಗವಹಿಸಲಿದ್ದಾರೆ.