ಚಾಮರಾಜನಗರ: ಈ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವುದು ಕೇವಲ ಇಬ್ಬರು ಮಕ್ಕಳು ಮಾತ್ರ. ಇವರಿಗೆ ಪಾಠ ಮಾಡಲು ಒಬ್ಬ ಶಿಕ್ಷಕಿ ಇದ್ದಾರೆ.
ಇದು ತಾಲೂಕಿನ ಕರಿಯನಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. 1ರಿಂದ 7ನೇ ತರಗತಿವರೆಗೆ ಇರುವ ಶಾಲೆಯಲ್ಲಿ 4ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ, 7ನೇ ತರಗತಿಯಲ್ಲಿ ಒಬ್ಬಳು ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಶಿಕ್ಷಕಿ ಭಾರತಿ ಪಾಠ-ಪ್ರವಚನ ಮಾಡುತ್ತಿದ್ದಾರೆ.
ಅಧಿಕ ಮಕ್ಕಳಿದ್ದ ಶಾಲೆ: ಕರಿಯನಕಟ್ಟೆ ಗ್ರಾಮದ ಸರ್ಕಾರಿ ಶಾಲೆಗೆ ಬಹುವರ್ಷಗಳ ಇತಿಹಾಸವಿದೆ. ಸುಮಾರು 1965ರಲ್ಲಿ ಶಾಲೆ ಶುರುವಾಯಿತು. 200ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಕ್ಕಳ ದಾಖಲಾತಿಗೆ ಅನುಗುಣವಾಗಿ ಒಂದು ಕಡೆ ಮೂರು ಕೊಠಡಿಗಳು, ಅಡುಗೆ ಕೋಣೆ, ಶೌಚಗೃಹ, ಮತ್ತೊಂದು ಕಡೆ ಎರಡು ಕಟ್ಟಡಗಳು ಸೇರಿ ಒಟ್ಟು 5 ಕಟ್ಟಡಗಳಿದ್ದವು. ಆದರೆ ಇದರಲ್ಲಿ ಶಿಥಿಲಗೊಂಡಿದ್ದ ಒಂದು ಕೊಠಡಿಯನ್ನು ನೆಲಸಮ ಮಾಡಲಾಯಿತು. ಪ್ರಸ್ತುತ ಸುಸಜ್ಜಿತವಾದ 4 ಕೊಠಡಿಗಳಿವೆ. ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದ್ದಾಗ ಕೊಠಡಿಗಳು ತುಂಬಿದ್ದವು. ಆದರೆ ಈಗ ಕೇವಲ ಎರಡು ಮಕ್ಕಳು ಮಾತ್ರ ಇದ್ದು, ಕೊಠಡಿಗಳು ಖಾಲಿ ಹೊಡೆಯುತ್ತಿವೆ.
ಕಾರಣವೇನು?: ಸಹಜವಾಗಿ ಪಾಲಕರಿಗೆ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಕಡಿಮೆ ಮಾಡುತ್ತದೆ. ಇಲ್ಲೂ ಇದೇ ಕಾರಣ ಎಂದು ಶಿಕ್ಷಕಿ ಭಾರತಿ ಹೇಳುತ್ತಾರೆ. ಶಾಲಾ ದಾಖಲಾತಿ ಆಂದೋಲನ ನಡೆಸಿ, ಮನೆ-ಮನೆಗಳಿಗೆ ಭೇಟಿ, ಮುಖಂಡರು ಮತ್ತು ಪಾಲಕರ ಜತೆಗೆ ಮಾತುಕತೆ ಮಾಡಿದ್ದೇನೆ. ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಸುಮಾರು 15 ಮಕ್ಕಳ ಮಾಹಿತಿ ಸಿಕ್ಕಿದೆ. ಇನ್ನು ಗ್ರಾಮದ ಅಂಗನವಾಡಿಗೆ ಮಕ್ಕಳು ದಾಖಲಾಗುವುದೇ ಕಡಿಮೆಯಾಗಿದೆ. ಅಲ್ಲಿಂದ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ತಗ್ಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಅಂಗನವಾಡಿಯ ಶಿಕ್ಷಕಿ ಪ್ರಮೀಳಾ ಮಾತನಾಡಿ, ವರ್ಷದಿಂದ ವರ್ಷಕ್ಕೆ ಅಂಗನವಾಡಿಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಮಕ್ಕಳ ಸಂಖ್ಯೆ ನಾಲ್ಕೈದಕ್ಕೆ ಬಂದು ನಿಂತಿದೆ. ಪಾಲಕರನ್ನು ಎಷ್ಟೇ ಮನವೊಲಿಸಿದರೂ ಖಾಸಗಿ ಶಾಲೆಗಳತ್ತ ಒಲವು ತೋರುತ್ತಾರೆ. ಅಲ್ಲದೇ, ಗ್ರಾಮದಲ್ಲಿ ಮದುವೆ ವಯಸ್ಸಿನ ಯುವಕರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಎಲ್ಲೂ ಹೆಣ್ಣು ಸಿಗದೆ ಇರುವ ಸಮಸ್ಯೆ ಇಲ್ಲೂ ಇದೆ ಎಂದಿದ್ದಾರೆ.
ಕಳೆದ ವರ್ಷ ನಾಲ್ವರು ವಿದ್ಯಾರ್ಥಿಗಳು: ಕರಿಯನಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷ 4 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಈ ವರ್ಷ 2ಕ್ಕೆ ಇಳಿದಿದೆ. ಇಬ್ಬರು ಶಿಕ್ಷಕರಿದ್ದರು. ಶಿಕ್ಷಕ ಪ್ರಸನ್ನ ಅವರು ಇತ್ತೀಚೆಗಷ್ಟೇ ನಿವೃತ್ತರಾದರು. ಇದೀಗ ಶಿಕ್ಷಕಿ ಭಾರತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹದೇವಮ್ಮ ಅಡುಗೆ ತಯಾರಿಕೆ ಕೆಲಸ ಮಾಡುತ್ತಿದ್ದಾರೆ. ‘ನಾನು 23 ವರ್ಷಗಳಿಂದ ಈ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೇನೆ. ಹಲವು ವರ್ಷಗಳ ಹಿಂದೆ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ಇದ್ದರು’ ಎಂದು ಮಹದೇವಮ್ಮ ಸ್ಮರಿಸುತ್ತಾರೆ.
ಈ ತಿಂಗಳ ಕೊನೆಯವರೆಗೂ ಸರ್ಕಾರಿ ಶಾಲೆಗೆ ದಾಖಲಾತಿಯನ್ನು ಮಾಡಿಕೊಳ್ಳಲು ಅವಕಾಶವಿದೆ. ಅಲ್ಲಿಯವರೆಗೂ ಕರಿಯನಕಟ್ಟೆ ಶಾಲೆಯಲ್ಲಿ ಎಷ್ಟು ಮಕ್ಕಳು ದಾಖಲಾಗುತ್ತಾರೋ ನೋಡಬೇಕು. ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರಾಮಚಂದ್ರರಾಜೇ ಅರಸ್, ಡಿಡಿಪಿಐ, ಚಾಮರಾಜನಗರ