ಆಲ್ದೂರು: ತುಂಬಳ್ಳಿಪುರ ಗ್ರಾಮದ ಡೀಮ್ಡ್ ಾರೆಸ್ಟ್‌ನಲ್ಲಿ ಬೀಟೆ ಮರಗಳನ್ನು ಕಡಿದು ಸಾಗಿಸುತ್ತಿದ್ದ ಇಬ್ಬರನ್ನು ಆಲ್ದೂರು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಪಿಕಪ್ ವಾಹನ ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ರಾಮನಹಳ್ಳಿ ಪ್ರದೀಪ್, ಕಲ್ಲುದೊಡ್ಡಿ ಗ್ರಾಮದ ವಿಜಯ್ ಬಂಧಿತರು. ಬೆರಣಗೋಡು ಗ್ರಾಮದ ಸುರೇಶ್, ತುಂಬಳ್ಳಿಪುರದ ರವಿ ತಲೆಮರೆಸಿಕೊಂಡಿದ್ದಾರೆ.
ತುಂಬಳ್ಳಿಪುರ ಮೀಸಲು ಅರಣ್ಯದಲ್ಲಿ ಬುಧವಾರ ಬೀಟೆ ಮರಗಳನ್ನು ಕಡಿದು ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಸುರೇಶ್ ಪ್ರಕರಣದ ಪ್ರಮುಖ ಆರೋಪಿ. ಈ ಹಿಂದೆಯೂ ಮರ ಸಾಗಿಸುತ್ತಿದ್ದಾಗ ಸಿಕ್ಕಿ ಹಾಕಿಕೊಂಡಿದ್ದ. ಈತನ ವಿರುದ್ಧ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದಂತೆ ಪ್ರಭಾವಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಆಲ್ದೂರು ವಲಯ ಅರಣ್ಯಾಧಿಕಾರಿ ಕೆ.ಆರ್ ಹರೀಶ್, ಉಪವಲಯ ಅರಣ್ಯಾಧಿಕಾರಿಗಳಾದ ಗೌತಮ್, ಸಂದೀಪ್, ನವೀನ್, ಚೇತನ್, ಚಿದಾನಂದ್, ಅರಣ್ಯ ರಕ್ಷಕರಾದ ವಿಜೇಂದ್ರ, ತೀರ್ಥಕುಮಾರ್, ಚೇತನ್, ಪ್ರಕಾಶ್, ನಾಗರಾಜ್,ದೂಜಾ, ಜುಂಜಯ್ಯ, ನಂದನ್ ಇದ್ದರು.