ಮೈಸೂರು: ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಪ್ರತಿಷ್ಠಿತ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಮತ್ತು ವಕೀಲರೊಬ್ಬರು ಬಂಧಿತರು ಎಂಬುದಾಗಿ ತಿಳಿದುಬಂದಿದೆ.
ಕುವೆಂಪುನಗರದ ಕೆ.ಬ್ಲಾಕ್ ಆದಿಚುಂಚನಗಿರಿ ರಸ್ತೆಯಲ್ಲಿ ಬುಲೆಟ್ ಬೈಕ್ ನಿಲ್ಲಿಸಿಕೊಂಡು ಅಲ್ಲಿಗೆ ಗಿರಾಕಿಗಳನ್ನು ಕರೆಸಿಕೊಳ್ಳುತ್ತಿದ್ದರು. ಬಂದವರಿಗೆ ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿ ಡಿ. 23ರಂದು ಇಬ್ಬರನ್ನೂ ಬಂಧಿಸಿದ್ದಾರೆ.
31 ಗ್ರಾಂ ತೂಕದ ಎಂಡಿಎಂಎ ಮಾತ್ರೆ, ಎಲ್‌ಎಸ್‌ಡಿ ಪೇಪರ್ ಡ್ರಗ್ಸ್, 5 ಸಾವಿರ ರೂ. ನಗದು, 2 ಮೊಬೈಲ್ ಫೋನ್, 1 ಬೈಕ್ ವಶಪಡಿಸಿಕೊಂಡಿದ್ದಾರೆ. ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರು ಮಾದಕ ವಸ್ತುವನ್ನು ಎಲ್ಲಿಂದ ತೆಗೆದುಕೊಂಡು ಬರುತ್ತಿದ್ದರು, ಮೈಸೂರಿನಲ್ಲಿ ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.