ಅಥಣಿ ಗ್ರಾಮೀಣ: ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚಾಲಕರಿಗೆ ಅಥಣಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಓಂಕಾರಮೂರ್ತಿ ಎಚ್. ಅವರು 1 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಅಂಕಲಗಿ ಗ್ರಾಮದ ಯಲ್ಲಪ್ಪ ಗಂಗನ್ನಹಳ್ಳಿ ಹಾಗೂ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸಂಗಪ್ಪ ಬಿರಾದಾರ ಶಿೆಗೊಳಗಾದ ಚಾಲಕರು.
2014 ಮಾರ್ಚ್ 7ರಂದು ಚಾಲಕ ಸಂಗಪ್ಪ ಬಿರಾದಾರ ಕಕಮರಿಯಿಂದ ಕೋಹಳ್ಳಿ ಕಡೆಗೆ ಅತಿವೇಗವಾಗಿ ಕ್ರೂಸರ್ ವಾಹನ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಅಶ್ವಿನಿಗೆ ಹಾಯಿಸಿ ಮರಣಪಡಿಸಿದ್ದ. 2019 ನವೆಂಬರ್ 7ರಂದು ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದ ಬಳಿ ಬೈಕ್ ಹಿಂಬದಿಗೆ ಚಾಲಕ ಯಲ್ಲಪ್ಪ ಗಂಗನ್ನಹಳ್ಳಿ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡಿಸಿದ್ದರಿಂದ ಅಥಣಿ ಪಟ್ಟಣದ ಚಂದ್ರಶೇಖರ ಮುರಗೆಪ್ಪ ತಂಗಡಿ ಸ್ಥಳದಲ್ಲೇ ಮೃತಪಟ್ಟಿದ್ದ.
ಈ ಎರಡೂ ಪ್ರಕರಣ ಐಗಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಅಂದಿನ ತನಿಖಾಧಿಕಾರಿ ಸಿಪಿಐ ಎಸ್.ಎಚ್. ಸುಬೇದಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸನತಕುಮಾರ ಖೇಮಲಾಪೂರೆ ವಾದ ಮಂಡಿಸಿದ್ದರು.