ಮೈಸೂರು: ನಗರದ ಹೊರವಲಯದ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕಳೆದ 10 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಸುಳಿವು ಇನ್ನೂ ಪತ್ತೆಯಾಗಿಲ್ಲ. ಇದು ಅರಣ್ಯ ಇಲಾಖೆಯವರಿಗೆ ತಲೆಬೀಸಿ ಮಾಡಿದ್ದರೆ, ಇನ್ಫೋಸಿಸ್ ಸಿಬ್ಬಂದಿಗೆ ಆತಂಕ ಸೃಷ್ಟಿಸಿದೆ.
ಡಿ.31ರಂದು ಚಿರತೆಯೊಂದು ಓಡಾಡುತ್ತಿರುವ ದೃಶ್ಯ ಅಲ್ಲಿನ ಭದ್ರತಾ ಸಿಬ್ಬಂದಿಗೆ ಕಂಡು ಬಂದಿತ್ತು. ಸಿಸಿ ಕ್ಯಾಮರಾದಲ್ಲೂ ಅದರ ದೃಶ್ಯ ಸೆರೆಯಾಗಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆ ವ್ಯಾಪಕ ಬಲೆ ಬೀಸಿ, ಕಾರ್ಯಾಚರಣೆ ನಡೆಸುತ್ತಿದ್ದರೂ ಇನ್ನೂ ಅಜ್ಞಾತವಾಗಿದೆ. ಇನ್ಫೋಸಿಸ್ ಆವರಣದಲ್ಲಿ 22ಕ್ಕೂ ಹೆಚ್ಚು ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಎರಡು ಬೋನು, 1 ಕ್ಯಾಟಲ್ ಪೆನ್‌ಕೇಜ್ (ಬೋನು) ಇಡಲಾಗಿದ್ದರೂ ಸುಳಿವು ಪತ್ತೆಯಾಗಿಲ್ಲ.
ಈ ಹಿನ್ನೆಲೆಯಲ್ಲಿ ಚಿರತೆ ಪತ್ತೆ ಹಾಗೂ ಸೆರೆ ಹಿಡಿಯುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. 350 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಎಲ್ಲಿ ಅಡಗಿರಬಹುದು ಎಂಬುದು ತಿಳಿಯುತ್ತಿಲ್ಲ. ಇದರಿಂದಾಗಿ ಅರಣ್ಯ ಇಲಾಖೆ ಹೊಸ ತಂತ್ರ ರೂಪಿಸುತ್ತಿದೆ. ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸುವ ಚರಂಡಿಗೆ ಕಬ್ಬಿಣದ ಜಾಲರಿ ಹಾಕಲಾಗಿದೆ.
ಚರಂಡಿಯಿಂದ ಚಿರತೆ ನುಸುಳಿ ಬರುವುದನ್ನು ತಡೆಗಟ್ಟಿದಂತಾಗಿದೆ. ಕೆಲವು ಸ್ಥಳದಲ್ಲಿ ಮರಳು, ಮಣ್ಣನ್ನು ಹಾಕಲಾಗಿದೆ. ಇದರಿಂದ ಚಿರತೆ ಹೆಜ್ಜೆ ಗುರುತು ಪತ್ತೆಗೆ ಸಹಕಾರವಾಗಲಿದೆ.
ಇಲ್ಲಿರುವ ಹಾಸ್ಟೆಲ್ ಸೇರಿದಂತೆ ಎಲ್ಲ ಕಟ್ಟಡಗಳ ಸೆಲ್ಲಾರ್ ಬಾಗಿಲು ಹಾಕಲಾಗಿದೆ. ಹಾಸ್ಟೆಲ್ ಬಾಗಿಲು ಸದಾ ಹಾಕಿರುವಂತೆ ಸೂಚನೆ ನೀಡಲಾಗಿದೆ. ಹಾಸ್ಟೆಲ್‌ನಲ್ಲಿ ಸುಮಾರು 1,200 ಉದ್ಯೋಗಿಗಳಿಗೆ ಕರ್ತವ್ಯಕ್ಕೆ ತೆರಳುವ ಬ್ಲಾಕ್(ಕಟ್ಟಡಕ್ಕೆ)ಗೆ ತೆರಳಲು ನಿಗದಿತ ಮಾರ್ಗದಲ್ಲೇ ಹೋಗಿ-ಬರುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ.
ಇವರು ಉದ್ಯಾನದಲ್ಲಿ ವಿರಮಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ರಾತ್ರಿ ವೇಳೆ ಹಾಸ್ಟೆಲ್‌ನಿಂದ ಹೊರ ಬರದಂತೆ ತಿಳಿಸಲಾಗಿದೆ. ಹಾಸ್ಟೆಲ್‌ನಿಂದ ಮುಖ್ಯ ಕಟ್ಟಡಕ್ಕೆ ಉದ್ಯೋಗಿಗಳು ಬರುವಾಗ ಭದ್ರತೆಗಾಗಿ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ.