ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ನಿರ್ಮಿಸುತ್ತಿರುವ ನೂತನ ವಿದ್ಯುತ್ ಉಪ ಕೇಂದ್ರದ ಕಾಮಗಾರಿಯನ್ನು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಪರಿಶೀಲಿಸಿದರು. ಅಧಿಕಾರಿಗಳಾದ ಮಂಜುನಾಥ್, ಮಾರುತಿ, ಜಿತೇಂದ್ರಕುಮಾರ್, ಮಂಜುನಾಥ್, ರವಿಕುಮಾರ್ ಇತರರಿದ್ದರು. 
ಜಿಲ್ಲೆ

ಇನ್ನೊಂದು ವರ್ಷದಲ್ಲಿ ಜನ್ನಾಪುರದಿಂದ ವಿದ್ಯುತ್ ಪೂರೈಕೆ

ಮೂಡಿಗೆರೆ: ಮಲೆನಾಡು ಭಾಗದ ಕಾಫಿ ತೋಟದಲ್ಲಿ ವಿದ್ಯುತ್ ಲೈನ್ ಹಾದು ಹೋಗಿರುವ ಕಾರಣ ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ಕಂಬ ಮತ್ತು ತಂತಿ ತುಂಡಾಗಿ ವಿದ್ಯುತ್ ಪೂರೈಕೆಗೆ ಅಡಚಣೆಯುಂಟಾಗುತ್ತಿದೆ. ವಿದ್ಯುತ್ ಉಪ ಕೇಂದ್ರ ಸ್ಥಾಪನೆಯಾದ ಬಳಿಕ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ತಿಳಿಸಿದರು.

ಜನ್ನಾಪುರದಲ್ಲಿ ನೂತನ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಜನ್ನಾಪುರದಲ್ಲಿ 33/7 ಕೆವಿ ಸಾಮರ್ಥ್ಯದ ಉಪಕೇಂದ್ರ ಸ್ಥಾಪಿಸಲಾಗುತ್ತದೆ. ಬೆಂಗಳೂರಿನ ಈಟ ಇಂಜಿನಿಯರಿಂಗ್ ಕಂಪನಿಗೆ ವಿದ್ಯುತ್ ಉಪ ಕೇಂದ್ರ ನಿರ್ಮಾಣದ ಕಾಮಗಾರಿಯ ಗುತ್ತಿಗೆ ಜವಾಬ್ದಾರಿ ವಹಿಸಲಾಗಿದೆ. ಕಾಮಗಾರಿ ಭರದಿಂದ ಸಾಗಿದ್ದು ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಉಪ ಕೇಂದ್ರ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.

ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಮಳೆಗಾಲದಲ್ಲೂ ಮುಂದುವರಿಯಲಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಯುತ್ತದೆ. ಆದರೆ ಮೂಡಿಗೆರೆ ವಿದ್ಯುತ್ ಮುಖ್ಯ ಕೇಂದ್ರದಿಂದ ಜನ್ನಾಪುರದ ನೂತನ ಉಪಕೇಂದ್ರಕ್ಕೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈ ಕಾಮಗಾರಿ ಇನ್ನಷ್ಟೇ ಆರಂಭಿಸಬೇಕಾಗಿದೆ. ಮೂಡಿಗೆರೆ ಮುಖ್ಯ ವಿದ್ಯುತ್ ಸರಬರಾಜು ಕೇಂದ್ರದಿಂದ ಜನ್ನಾಪುರದವರೆಗೆ ಹೈ ಪವರ್ ಲೈನ್ ದುಂಡುಗ ಗ್ರಾಮದ ಕಾಫಿ ತೋಟದೊಳಗೆ ಹಾದು ಬರಬೇಕಾಗಿದೆ. ಮಳೆಗಾಲದಲ್ಲಿ ಕಾಮಗಾರಿ ವಿಳಂಬವಾಗಲಿದೆ. ಹೈ ಪವರ್ ಲೈನ್ ಕಾಮಗಾರಿ ಪೂರ್ಣಗೊಂಡ ಕೂಡಲೆ ವಿದ್ಯುತ್ ಉಪ ಕೇಂದ್ರ ಉದ್ಘಾಟನೆಗೊಳ್ಳಲಿದೆ. ನಂತರ ಗೋಣಿಬೀಡು ಹೋಬಳಿ ವ್ಯಾಪ್ತಿಯ ಜನರಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ತಿಳಿಸಿದರು.

ದಾರದಹಳ್ಳಿ ವಿದ್ಯುತ್ ವಿಭಾಗೀಯ ಕಚೇರಿ ಹಾಗೂ ಮಳೆಯಿಂದ ವಿದ್ಯುತ್ ಕಂಬ ಮತ್ತು ತಂತಿ ತುಂಡಾಗಿ ಹಾನಿಯಾದ ಗೋಣಿಬೀಡು ಹೋಬಳಿಯ ವಿವಿಧ ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಅವರೊಂದಿಗೆ ಮೆಸ್ಕಾಂ ಮುಖ್ಯ ಅಭಿಯಂತ ಮಂಜುನಾಥ್, ಕಾರ್ಯಪಾಲಕ ಅಭಿಯಂತ ಮಾರುತಿ, ಸಹಾಯಕ ಕಾರ್ಯಪಾಲಕ ಅಭಿಯಂತ ಜಿತೇಂದ್ರಕುಮಾರ್, ಜನ್ನಾಪುರ ವಿಭಾಗದ ಮೆಸ್ಕಾಂ ಅಧಿಕಾರಿಗಳಾದ ಮಂಜುನಾಥ್, ರವಿಕುಮಾರ್ ಇತರರಿದ್ದರು.