ಶಿರಸಿ: ಮಳೆಗಾಲ ಸಮೀಪಿಸುತ್ತಿದ್ದರೂ ನಗರಸಭೆ ವ್ಯಾಪ್ತಿಯಲ್ಲಿ ಮಳೆಗಾಲಪೂರ್ವ ಕಾಮಗಾರಿ ಆರಂಭ ಆಗದಿರುವುದು ನಗರ ವಾಸಿಗಳ ಆತಂಕ ಹೆಚ್ಚಿಸಿದೆ.
ಕೆಲ ದಿನಗಳ ಹಿಂದೆ ಭಾರಿ ಮಳೆಗೆ ಶಿರಸಿ ನಗರದ ಕೆಲ ಕಡೆಗಳಲ್ಲಿ ಚರಂಡಿಗಳು ಕಟ್ಟಿ ರಸ್ತೆಗಳು ಜಲಾವೃತ್ತಗೊಂಡಿದ್ದವು. ಕೆಲವೆಡೆ ಮನೆಗಳಿಗೂ ನೀರು ನುಗ್ಗುವ ಆತಂಕ ಎದುರಾಗಿತ್ತು. ಮಳೆಗಾಲಪೂರ್ವ ಚರಂಡಿ ಸ್ವಚ್ಛತೆ ಮಾಡದಿರುವುದು ಇದಕ್ಕೆ ಕಾರಣವಾಗಿತ್ತು. ಪ್ರತೀ ವರ್ಷ ಏಪ್ರಿಲ್ ಅಂತ್ಯದೊಳಗೆ ಮಳೆಗಾಲಪೂರ್ವ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಆದರೆ ಪ್ರಸಕ್ತ ವರ್ಷ ಮೇ ತಿಂಗಳು ಆರಂಭವಾಗುತ್ತಿದ್ದರೂ ಸಹ ನಗರಸಭೆ ಮುಂಗಾರು ಪೂರ್ವದ ತಯಾರಿಗೆ ಮುಂದಾಗದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಮಲೆನಾಡಿನ ಪ್ರದೇಶವಾಗಿರುವ ಶಿರಸಿಯಲ್ಲಿ ಎಪ್ರಿಲ್ ಅಂತ್ಯ, ಇಲ್ಲವೇ ಮೇ ತಿಂಗಳಲ್ಲಿ ಮಳೆ ಬೀಳುವುದು ಸರ್ವೆ ಸಾಮಾನ್ಯವಾಗಿದ್ದು, ಮಳೆಗೂ ಮೊದಲು ಇಡೀ ನಗರವನ್ನು ಸಿದ್ಧಗೊಳಿಸುವುದು ನಗರಾಡಳಿತದ ಕರ್ತವ್ಯವಾಗಿದೆ.
ಕಾಮಗಾರಿ ಆರಂಭವಿಲ್ಲ: ಈಗಾಗಲೇ ಮುಂಗಾರು ಪೂರ್ವ ತಯಾರಿ ನಡೆಸಬೇಕಿತ್ತಾದರೂ ಎಪ್ರಿಲ್ ಅಂತ್ಯಗೊಳ್ಳುತ್ತಾ ಬಂದರೂ ಸ್ವಚ್ಚತೆ ಕಾಮಗಾರಿ ಆರಂಭವಾಗಿಲ್ಲ. ಮಳೆ ಆರಂಭಕ್ಕೂ ಮೊದಲು ನಗರದಲ್ಲಿರುವ ಎಲ್ಲಾ ಕಚ್ಚಾ ಚರಂಡಿಗಳನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕಿದೆ. ಅದೇ ರೀತಿ ದೊಡ್ಡದೊಡ್ಡ ಕಾಲುವೆಗಳ ಹೂಳು ತೆಗೆಸಬೇಕು. ಜೊತೆಗೆ ಗಿಡಗಂಟಿಗಳ ತೆರವು ಕಾರ್ಯ ಬಹುತೇಕ ಮುಗಿಸಬೇಕಿತ್ತಾದರೂ ಇಲ್ಲಿಯವರೆಗೆ ಯಾವ ಕೆಲಸವು ಆರಂಭವಾಗಿಲ್ಲ. ಈಗಾಗಲೇ ವಾರದ ಹಿಂದೆ ಸುರಿದ ಭಾರಿ ಮಳೆಗೆ ಚರಂಡಿಗಳು ಸಂಪೂರ್ಣ ಕಟ್ಟಿ ಆಗಿ ನೀರು, ತ್ಯಾಜ್ಯ ರಸ್ತೆ ಮೇಲೆ ಹರಿದು ವಾಹನ ಸವಾರರು, ಪಾದಾಚಾರಿಗಳು ಪರದಾಡಿ ನಗರಸಭೆ ಕಾರ್ಯವೈಖರಿಗೆ ಹಿಡಿಶಾಪ ಹಾಕಿದ್ದರು. ಯಲ್ಲಾಪುರ ರಸ್ತೆಯ ಅರ್ಬನ್ ಬ್ಯಾಂಕ್ ಸಮೀಪ ಗಟಾರ ಬಂದ್ ಮಾಡಿ ರಸ್ತೆ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಾಗಿ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ದುರ್ನಾತ ಬೀರುವ ಚರಂಡಿಗಳು: ನಗರದ ಬಹುತೇಕ ಗಟಾರಗಳು ಕಸ, ಕಡ್ಡಿ, ಪ್ಲಾಸ್ಟಿಕ್ ಬಾಟಲ್ ಹಾಗೂ ಮತ್ತಿತರ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿವೆ. ನಗರದ ನಿಲೇಕಣಿ, ಐದು ರಸ್ತೆ, ಜೂ ಸರ್ಕಲ್, ದೇವಿಕೆರೆ ಪಕ್ಕದ ಚರಂಡಿ, ಯಲ್ಲಾಪುರ ರಸ್ತೆ, ನಟರಾಜ ರಸ್ತೆ, ಹುಬ್ಬಳ್ಳಿ ರಸ್ತೆ, ಪಡ್ತಿಗಲ್ಲಿ, ಭೂತೇಶ್ವರ ಕಾಲೋನಿ, ಮುಸ್ಲಿಂ ಗಲ್ಲಿ, ಕೋಟೆಗಲ್ಲಿ, ಖಾಜಿ ಗಲ್ಲಿ, ಬನವಾಸಿ ರಸ್ತೆ, ಬಸವೇಶ್ವರ ನಗರ, ಐದು ರಸ್ತೆ, ನಿಲೇಕಣಿ, ಕೆಎಚ್ಬಿ ಕಾಲೋನಿ, ಶಿವಾಜಿಚೌಕ, ರಾಯರಪೇಟೆ, ಮರಾಠಿಕೊಪ್ಪ, ಅಯ್ಯಪ್ಪನಗರ, ಬಸವೇಶ್ವರ ಕಾಲೋನಿ, ಕಸ್ತೂರಬಾನಗರ ಸೇರಿದಂತೆ ಎಲ್ಲಾ ಕಡೆ ಚರಂಡಿಗಳು ತ್ಯಾಜ್ಯಗಳಿಂದ ತುಂಬಿಕೊಂಡಿವೆ. ಮಳೆಗಾಲಕ್ಕೂ ಮುನ್ನ ಸ್ವಚ್ಚಗೊಳಿಸದಿದ್ದರೆ ಆ ಭಾಗದಲ್ಲಿ ಮಳೆ ನೀರು ಸಂಗ್ರಹವಾಗಿ ರಸ್ತೆ ಜಲಾವೃತಗೊಳ್ಳುವ ಜೊತೆಗೆ ಜನವಸತಿ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.
ನಗರದಲ್ಲಿರುವ ಅವೈಜ್ಞಾನಿಕ ಚರಂಡಿಗಳಿಂದಾಗಿ ಸೊಳ್ಳೆಗಳ ಸಂತಾನ ದಿನೇ ದಿನೇ ಹೆಚ್ಚುತ್ತಿದೆ. ಚರಂಡಿಗಳಿಗೆ ಬಿಡುತ್ತಿರುವ ಮಲೀನ ನೀರು ಸರಾಗರವಾಗಿ ಹರಿಯದೇ ನಿಂತಿರುತ್ತಿದ್ದು, ಸೊಳ್ಳೆಗಳ ಉತ್ಪತ್ತಿಗೆ ಕಾರಣ ಆಗುತ್ತಿದೆ. ಕೂಡಲೇ ನಗರಸಭೆ ಗಮನ ಹರಿಸಿ ನಗರದಾದ್ಯಂತ ಗಟಾರ ಸ್ವಚ್ಚಗೊಳಿಸುವ ಜತೆಗೆ ಮಳೆಗಾಲದ ಪೂರ್ವತಯಾರಿ ಕೆಲಸ ಕೈಗೆತ್ತಿಕೊಳ್ಳಬೇಕು. - ಗಿರೀಶ ನಾಯ್ಕ- ನಗರ ನಿವಾಸಿ
ನಗರದಲ್ಲಿ ಈಗಾಗಲೇ ಮಳೆ ಸುರಿದು ಕೆಲವೆಡೆ ಚರಂಡಿಗಳು ಕಟ್ಟಿ ರಸ್ತೆ ಮೇಲೆ ನೀರು ಹರಿದಿದೆ. ಕರೊನಾ ನೆಪದಲ್ಲಿ ಮಳೆಗಾಲದ ಪೂರ್ವತಯಾರಿ ಕೆಲಸ ವಿಳಂಬ ಮಾಡಬಾರದು. ಈ ಸಂಬಂಧ ಪೌರಾಯುಕ್ತರ ಬಳಿ ಚರ್ಚೆ ನಡೆಸಿದ್ದು, ಕೂಡಲೇ ಮುಂಗಾರು ಪೂರ್ವ ಸಿದ್ಧತಾ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಲಾಗಿದೆ. -ಗಣಪತಿ ನಾಯ್ಕ- ನಗರಸಭೆ ಸದಸ್ಯ.