ಉಡೇವಾ ಗ್ರಾಮದಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಪಶು ಚಿಕಿತ್ಸಾಲಯವನ್ನು ಉದ್ಘಾಟಿಸಿದರು. ಜಿ.ಎಚ್.ಶ್ರೀನಿವಾಸ್, ಭಾರತಿ ಸಿ. ರಾಜಪ್ಪ, ಸುಚಿತಾ ಸಂತೋಷ್ ಇತರರಿದ್ದರು.  
ಜಿಲ್ಲೆ

ಇನ್ನೂ ಮೂರು ಪಶು ಚಿಕಿತ್ಸಾಯ ತೆರೆಯಿರಿ

ಲಿಂಗದಹಳ್ಳಿ: ಉಡೇವಾ, ಗುಳ್ಳದಮನೆ, ಬಾವಿಕೆರೆ ಮತ್ತು ಹಾದಿಕೆರೆ ಗ್ರಾಮಗಳ ರೈತರ ಅನುಕೂಲಕ್ಕಾಗಿ ಉಡೇವಾ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ತೆರೆಯಲಾಗಿದೆ. ಮುಂದಿನ ವರ್ಷ ಮೂರೂ ಗ್ರಾಮಗಳಲ್ಲೂ ಪಶು ಚಿಕಿತ್ಸಾಲಯಗಳನ್ನು ತೆರೆಯಬೇಕು ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಮನವಿ ಮಾಡಿದರು.

ಮಂಗಳವಾರ ಉಡೇವಾ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯಾದ್ಯಂತ ಈ ಬಾರಿ 20 ಪಶು ಚಿಕಿತ್ಸಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದು, ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಉಡೇವಾ ಮತ್ತು ಮುಗುಳಿವಳ್ಳಿ ಗ್ರಾಮಗಳು ಸೇರಿವೆ ಎಂದರು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಪಶು ಚಿಕಿತ್ಸಾಲಯಗಳ ಸ್ಥಾಪನೆಗೆ ಅವಕಾಶ ನೀಡಿರುವುದರ ಜತೆಗೆ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಸಹಾಯಧನ ನೀಡಿ ಪ್ರೋತ್ಸಾಹ ನೀಡುತ್ತಿದೆ. ಹೊಸದಾಗಿ ಪಶು ವೈದ್ಯಾಧಿಕಾರಿಗಳು, ಪಶು ನಿರೀಕ್ಷಕರು ಹಾಗೂ ಡಿ ದರ್ಜೆ ನೌಕರರನ್ನು ನೇಮಕ ಮಾಡಿಕೊಂಡು ಎಲ್ಲ ಪಶು ಚಿಕಿತ್ಸಾಲಯಗಳಿಗೂ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಉಡೇವಾ ಗ್ರಾಪಂ ಅಧ್ಯಕ್ಷೆ ಭಾರತಿ ಸಿ. ರಾಜಪ್ಪ ಮಾತನಾಡಿ, ಉಡೇವಾ ಗ್ರಾಮದಲ್ಲಿ ಸಮಾರು 2000 ಸಾಕು ಪ್ರಾಣಿಗಳಿದ್ದು, ಅವುಗಳ ಚಿಕಿತ್ಸೆಗಾಗಿ ಲಿಂಗದಹಳ್ಳಿ ಇಲ್ಲವೇ ಕಾಮನದುರ್ಗಕ್ಕೆ ಹೋಗಬೇಕಾಗಿತ್ತು. ಈ ವಿಷಯದ ಬಗ್ಗೆ ಗ್ರಾಮಸ್ಥರೆಲ್ಲರೂ ಸೇರಿ ಶಾಸಕರಿಗೆ ಮನವಿ ಮಾಡಿದ್ದರಿಂದ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ನಿರ್ಮಿಸಲಾಗಿದೆ. ವೈದ್ಯರು, ಅಗತ್ಯ ಸಿಬ್ಬಂದಿ ನೇಮಿಸುವಂತೆ ಮನವಿ ಮಾಡಿದರು.

ಪಶುಸಂಗೋಪನಾ ಇಲಾಖೆ ಆಯುಕ್ತೆ ರೂಪಾ, ನಿರ್ದೇಶಕರಾದ ಮಂಜುನಾಥ ಎಸ್. ಪಾಳೇಗಾರ್, ತಾಪಂ ಇಒ ಡಾ. ದೇವೇಂದ್ರಪ್ಪ, ಡಾ. ಮೋಹನ್‌ಕುಮಾರ್, ಡಾ. ಗೋವಿಂದಪ್ಪ, ಪಿಡಿಒ ಬಿ.ಮಂಜು, ಎನ್.ಜಿ.ರಮೇಶ್, ಮಹಮ್ಮದ್ ಅಕ್ಬರ್, ಎಲ್. ತಮ್ಮಯ್ಯ, ಸುಜಿತಾ ಸಂತೋಷ್, ಗ್ರಾಪಂ ಸದಸ್ಯರು ಇದ್ದರು.