ಗಜೇಂದ್ರಗಡ: ಎರಡು ವರ್ಷ ಕಳೆದರೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಗೊಂದಲ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯರಿಗೆ ಇನ್ನೂ ಅಧಿಕಾರ ಸಿಗದ ಕಾರಣ ಪಟ್ಟಣದ ಅಭಿವೃದ್ಧಿ ಗೌಣವಾಗಿದೆ.
ಪುರಸಭೆಯ 23 ಸದಸ್ಯರಲ್ಲಿ 18 ಬಿಜೆಪಿ, ಐವರು ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಈ ಹಿಂದೆ ಪ್ರಕಟಗೊಂಡ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು. 2018, ಸೆ. 3, ರಂದು ಪ್ರಕಟಿಸಲಾಗಿದ್ದ ಮೀಸಲಾತಿ ಪಟ್ಟಿಯಲ್ಲಿ ರೊಟೇಷನ್ ಪಾಲಿಸಿಲ್ಲ. ಹೀಗಾಗಿ, ಬಹುತೇಕ ಕಡೆ ಮೀಸಲು ಪುನರಾವರ್ತನೆ ಆಗಿದೆ. ಆದ್ದರಿಂದ ಸಮಸ್ಯೆ ಬಗೆಹರಿಸಬೇಕು ಎಂದು ಕೋರಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಆಧರಿಸಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು ಅದಿನ್ನೂ ತೆರವಾಗಿಲ್ಲ.
ಸದಸ್ಯರ ಕೊರಗು: ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ಸಮಸ್ಯೆಗೆ ನೆರವಾಗಬೇಕು ಎಂದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇವೆ. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದ ಕಾರಣ ನಾವು ಹೆಸರಿಗಷ್ಟೇ ಜನಪ್ರತಿನಿಧಿಗಳಾಗಿದ್ದೇವೆ. ಸದಸ್ಯರೆಂದು ಅಧಿಕಾರ ಚಲಾಯಿಸಲು ಆಗುತ್ತಿಲ್ಲ. ಗೆಲುವು ಸಾಧಿಸಿದ ಪ್ರಮಾಣಪತ್ರ ಹೊರತುಪಡಿಸಿದರೆ ಸದಸ್ಯರೆಂದು ಹೇಳಿಕೊಳ್ಳಲು ನಮ್ಮ ಬಳಿ ಯಾವುದೇ ಗುರುತು ಇಲ್ಲ. ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಣಯಗಳನ್ನು ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿಯವರೇ ಕೈಗೊಳ್ಳುತ್ತಾರೆ. ನಮ್ಮ ಸಲಹೆ, ಸೂಚನೆಗಳನ್ನು ಪರಿಗಣಿಸುವುದಿಲ್ಲ. ಪಟ್ಟಣದಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಾಮಾನ್ಯ ಸಭೆ ನಡೆದರೆ, ಕಾರ್ಯಗಳು ಕ್ಷಿಪ್ರಗತಿಯಲ್ಲಿ ಆಗುತ್ತವೆ. ಪ್ರಗತಿ ಪರಿಶೀಲನೆಯೂ ನಡೆಯುತ್ತದೆ. ಅಧಿಕಾರಿಗಳು ನಮ್ಮ ಮಾತಿಗೆ ಸ್ಪಂದಿಸುವುದಿಲ್ಲ. ಅನುದಾನದ ಬಳಕೆ ಬಗ್ಗೆಯೂ ಮಾಹಿತಿ ಗೊತ್ತಾಗುವುದಿಲ್ಲ. ವಾರ್ಡ್ನ ಕಾರ್ಯಗಳಿಗೆ ದೂರವಾಣಿ ಕರೆ ಮಾಡಿದರೆ ಅಧಿಕಾರಿಗಳು ಸ್ವೀಕರಿಸುವುದಿಲ್ಲ ಎಂದು ವಾರ್ಡ್ನ ಜನರು ನಮ್ಮ ಎದುರು ಅಹವಾಲು ತೋಡಿಕೊಳ್ಳುತ್ತಾರೆ. ಇದನ್ನು ಅಧಿಕಾರಿಗಳಿಗೆ ಹೇಳಿದರೆ, ಅವರು ಸ್ಪಂದಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪುರಸಭೆ ಸದಸ್ಯರಾದ ಸುಭಾಸ ಮ್ಯಾಗೇರಿ, ವೆಂಕಟೇಶ ಮುದಗಲ್ಲ, ಯಮನೂರ ತಿರಕೋಜಿ, ಮುರ್ತಜಾ ಡಾಲಾಯತ ಇತರರು.