ಮೈಸೂರು: ನಗರಕ್ಕೆ ಬರುವ ಪ್ರವಾಸಿಗರು ಪ್ರತಿಯೊಂದು ಸ್ಥಳದಲ್ಲೂ ಪ್ರತ್ಯೇಕ ಟಿಕೆಟ್ ಪಡೆಯಬೇಕಿದೆ. ಹಾಗಾಗಿ ಸಮಯ ವ್ಯರ್ಥವಾಗುವುದರಿಂದ ಕ್ಯೂಆರ್ ಕೋಡ್ ವ್ಯವಸ್ಥೆ ಇರುವ ‘ಒನ್ ಟಿಕೆಟ್’ ಜಾರಿಗೊಳಿಸುವ ಕುರಿತು ಚರ್ಚಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಪ್ರವಾಸಿಗರು ಒಂದು ಕಡೆ ಟಿಕೆಟ್ ಪಡೆದರೆ ಇನ್ನಿತರ ಆಯ್ದ ಪ್ರವಾಸಿ ತಾಣಗಳಿಗೆ ಪ್ರವೇಶ ಪಡೆಯಬಹುದು. ಇದರಿಂದ ಟಿಕೆಟ್ ಪಡೆಯಲು ಕಾಯುವ ಸಮಯ ತಪ್ಪುತ್ತದೆ. ಜತೆಗೆ ಪಾರ್ಕಿಂಗ್, ಊಟ, ತಿಂಡಿಯಲ್ಲಿಯೂ ರಿಯಾಯಿತಿ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.
ಕ್ಯೂ ಆರ್ ಕೋಡ್ ಮೂಲಕ ಪ್ರವಾಸಿ ತಾಣಗಳ ಮಾರ್ಗ, ಸಮೀಪದ ರೆಸ್ಟೋರೆಂಟ್, ಹೋಟೆಲ್‌ಗಳ ರೂಟ್ ಮ್ಯಾಪ್ ಸಹ ಜೋಡಣೆ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಹೀಗಾಗಿ ಪ್ರವಾಸಿಗರನ್ನು ದಾರಿತಪ್ಪಿಸುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಹೇಳಿದರು.
ಬೆಟ್ಟಕ್ಕೆ ರೋಪ್‌ವೇ ಪ್ರಸ್ತಾಪ ಇಲ್ಲ
ಚಾಮುಂಡಿಬೆಟ್ಟಕ್ಕೆ ರೋಪ್ ವೇ ಮಾಡುವ ಸಂಬಂಧ ಯಾವುದೇ ಚರ್ಚೆ ಆಗಿಲ್ಲ. ಸದ್ಯಕ್ಕೆ ಆ ಯೋಜನೆಯನ್ನು ಕೈಬಿಡಲಾಗಿದೆ. ಲಲಿತಮಹಲ್ ಹಳೆಯ ಕಟ್ಟಡವಾದ್ದರಿಂದ ಅದರ ಪುನಶ್ಚೇತನ ಆಗಬೇಕು. ಅದಕ್ಕೆ ಕೋಟಿಗಟ್ಟಲೆ ಹಣ ಬೇಕಾಗಿರುವುದರಿಂದ ಮಹಾರಾಜರು ಕಟ್ಟಿಸಿದ ರೀತಿಯಲ್ಲೇ ಹೇಗೆ ಪುನಶ್ಚೇತನ ಮಾಡಬೇಕು ಎನ್ನುವ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.