ಜಿಲ್ಲೆ

ಇನ್ನು ಗ್ಯಾರಂಟಿ ಪರಶುರಾಮಪುರ ತಾಲೂಕು, ಈಡೇರದಿದ್ದರೆ ರಾಜಕೀಯ ನಿವೃತ್ತಿ

ಚಿತ್ರದುರ್ಗ: ಪರಶುರಾಮಪುರ ತಾಲೂಕು ಕೇಂದ್ರವಾಗಲಿದೆ. ಇದು ನನ್ನ ಗ್ಯಾರಂಟಿ. ಒಂದು ವೇಳೆ ಇದು ಈಡೇರದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಾರ್ವಜನಿಕರೊಂದಿಗೆ ಕೈ ಜೋಡಿಸಿ ತಾಲೂಕು ಹೋರಾಟದಲ್ಲಿ ನಾನೂ ಭಾಗಿಯಾಗುತ್ತೇನೆ.

ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ-ದಿಗ್ವಿಜಯ ಸುದ್ದಿವಾಹಿನಿ ಚಿತ್ರದುರ್ಗದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ತಮ್ಮ ವಿಚಾರಗಳನ್ನು ಶಾಸಕ ಟಿ.ರಘುಮೂರ್ತಿ ಹಂಚಿಕೊಂಡರು. ಅದನ್ನು ಇಲ್ಲಿ ನೀಡಲಾಗಿದೆ.

ಕ್ಷೇತ್ರಾಭಿವೃದ್ಧಿಯ ವಿಚಾರದ ಬಗ್ಗೆ ಹೇಳುವುದಾದರೆ ಮಾದರಿ ಚಳ್ಳಕೆರೆ ನಗರ-ಕ್ಷೇತ್ರದ ಕನಸು ನನ್ನದು. ಎರಡು ಅವಧಿಯಿಂದಲೂ ಇದಕ್ಕಾಗಿ ಪ್ರಯತ್ನಿಸಿದ್ದೇನೆ. ಖಂಡಿತಾ ಮುಂದಿನ ಹಣಕಾಸು ಸಾಲಿನಿಂದ ಅಗತ್ಯ ಅನುದಾನವೂ ಬಿಡುಗಡೆಯಾಗಲಿದೆ.

ಗಡಿಭಾಗ ಪರಶುರಾಮಪುರ ಹೋಬಳಿ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಪರಶುರಾಮಪುರಕ್ಕೆ ತಾಲೂಕಾಗುವ ಎಲ್ಲ ಅರ್ಹತೆ ಇದೆ. ಎಂ.ಬಿ.ಪ್ರಕಾಶ್ ಸಮಿತಿ ಶಿಫಾರಸು ಕೂಡ ಇದೆ. ತಾಲೂಕು ಕೇಂದ್ರವನ್ನಾಗಿಸುವ ಸಂಕಲ್ಪ ನನ್ನದು. ಅಧಿವೇಶನದಲ್ಲಿ ಸಾಕಷ್ಟು ಬಾರಿ ಗಮನ ಸೆಳೆದಿದ್ದೇನೆ. ಶಾಸಕರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. 63 ಹೊಸ ತಾಲೂಕು ಘೋಷಣೆ ವೇಳೆ ನಮ್ಮದು ಸೇರಿತ್ತು. ಆದರೆ, ಕಾರಣಾಂತರಗಳಿಂದ ಕೈ ತಪ್ಪಿತು.

ಸತತ ಮೂರು ಬಾರಿ ಕ್ಷೇತ್ರದ ಜನರು ಆಶೀರ್ವದಿಸಿದ್ದಾರೆ. ಎರಡು ಅವಧಿಗಳಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ, ಆರ್‌ಒ ಘಟಕಗಳು, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಪಂಗಳಲ್ಲೂ 4 ಬಾರಿ ಹಾಗೂ 2 ಬಾರಿ ಗ್ರಾಮಮಟ್ಟದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದೇನೆ. 261 ಜನವಸತಿ ಪ್ರದೇಶಗಳ ಮೂಲಸೌಕರ್ಯಕ್ಕೆ ಶ್ರಮಿಸುತ್ತಿದ್ದೇನೆ.

ಯುಜಿಡಿಗೆ ಬೇಕು 240 ಕೋಟಿ ರೂ.: ಚಳ್ಳಕೆರೆ ನಗರದ ಒಳಚರಂಡಿ ಕಾಮಗಾರಿಗೆ 240 ಕೋಟಿ ರೂ. ಅನುದಾನದ ಅಗತ್ಯವಿದೆ. ಈ ಕಾಮಗಾರಿಯಿಂದ ನಗರದ ಎಲ್ಲ ವಾರ್ಡ್‌ಗಳ ರಸ್ತೆ ಅಭಿವೃದ್ಧಿ ಸಾಧ್ಯವಾಗಲಿದೆ. ನಗರದ ಖಾಸಗಿ ಬಸ್ ನಿಲ್ದಾಣ, ನಗರಸಭೆ ಕಟ್ಟಡ ಹಾಗೂ ವಿವಿಧ ಸಮುದಾಯಗಳ ಭವನಗಳನ್ನು ಪೂರ್ಣಗೊಳಿಸಲಾಗುವುದು. ಕೊಳೆಗೇರಿಯ 1,371 ಕುಟುಂಬಗಳ ಪೈಕಿ 800 ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಕಾನೂನಾತ್ಮಕ ತೊಡಕಿನಿಂದಾಗಿ ಇನ್ನೂ ಕೆಲವು ಕುಟುಂಬಗಳಿಗೆ ವಿತರಣೆ ವಿಳಂಬವಾಗಿದೆ.

ವಸತಿ ಸೌಲಭ್ಯ: ಬಡವರಿಗೆ ವಸತಿ ಸೌಲಭ್ಯ ಒದಗಿಸಲು ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದೇನೆ. ಸರ್ಕಾರಿ ಜಮೀನು ಇಲ್ಲದಿದ್ದರೆ ಖಾಸಗಿಯವರಿಂದ ಖರೀದಿಸಬೇಕಾಗುತ್ತದೆ. ಸ್ಮಶಾನ ಸಮಸ್ಯೆ ನಿವಾರಿಸಲು ಆದ್ಯತೆ ಕೊಟ್ಟಿದ್ದೇನೆ. ಈ ಸಂಬಂಧ ಅಧಿಕಾರಿಗಳಿಗೆ ತಿಳಿಸಿದ್ದೇನೆ.