ತುರುವೇಕೆರೆ: ಪಟ್ಟಣದ ಕೆ.ಹಿರಣ್ಣಯ್ಯ ಬಯಲುರಂಗ ಮಂದಿರದಲ್ಲಿ ಸಹಸ್ರಾರು ಕಾರ್ಯಕರ್ತರ ಜತೆ ಶುಕ್ರವಾರ ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು.
ತೆರೆದ ವಾಹನದಲ್ಲಿ ಎಂ.ಟಿ.ಕೃಷ್ಣಪ್ಪ ಅವರನ್ನು ಮೆರವಣಿಗೆ ಮೂಲಕ ಕರೆತಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಾಣಸಂದ್ರ ವೃತ್ತದಲ್ಲಿ ಜಮಾಯಿಸಿ ಕ್ರೇನ್ ಮೂಲಕ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಸಂಭ್ರಮಿಸಿದರು. ಅಲ್ಲದೆ ಜೆಸಿಬಿಗಳಲ್ಲಿ ಹೂವಿನ ಮಳೆ ಸುರಿಸಿ ಕೆ.ಹಿರಣ್ಣಯ್ಯ ಬಯಲು ಮಂದಿರಕ್ಕೆ ಕರೆತಂದರು.
ಇದೇ ಕೊನೆಯ ಚುನಾವಣೆ: ಮುಂಬರುವ ವಿಧಾನಸಭೆ ಚುನಾವಣೆ ನನಗೆ ಕಡೆಯ ಚುನಾವಣೆಯಾಗಿದೆ ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ ರೈತರಿಗೆ ಉತ್ತಮ ಯೋಜನೆ ಸಿಕ್ಕಿಲ್ಲ. ರಾಜ್ಯದಲ್ಲಿ ಜೆಡಿಎಸ್ ಕೈಗೊಂಡ ಜನತಾ ಜಲಧಾರೆಯಲ್ಲಿ ಸುಮಾರು 10ಲಕ್ಷ ಜನರು ಸೇರಿ ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬರಬೇಕಿದೆ ಎಂಬ ಸಂದೇಶ ನೀಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.
ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ: ಬೆಳಗ್ಗೆ 10 ಗಂಟೆಯಿಂದಲೇ ಆದಿ ಚುಂಚನಗಿರಿ ಆಸ್ಪತ್ರೆ ಹಾಗೂ ಕಿದ್ವಾಯಿ, ಜಯದೇವ ಹೃದ್ರೋಗ ಹಾಗೂ ಒಕ್ಕಲಿಗರ ದಂತ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಸಾವಿರಾರು ಜನರು ಶಿಬಿರದ ಪ್ರಯೋಜನ ಪಡೆದರು. ಅಲ್ಲದೆ ನೂರಾರು ಜೆಡಿಎಸ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರಗತಿಪರ ರೈತರು, ನಿವೃತ್ತ ಯೋಧರು ಹಾಗೂ ಹಿರಿಯ ಜೆಡಿಎಸ್ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.
ಭರ್ಜರಿ ಬಾಡೂಟ: ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಮಾಂಸಹಾರ ಹಾಗೂ ಸಸ್ಯಾಹಾರದ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಿ.ಎಸ್.ದೇವರಾಜು ಹಾಗೂ ತಾವರೆಕೆರೆ ತಿಮ್ಮೇಗೌಡ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಯುವ ಜನತಾದಳದ ತಾಲೂಕು ಅಧ್ಯಕ್ಷ ಬಾಣಸಂದ್ರರಮೇಶ್, ವಕ್ತಾರ ವೆಂಕಟಾಪುರ ಯೋಗೀಶ್, ಎಂ.ಟಿ.ಕೆ ಪತ್ನಿ ಸರಳಾ, ಮುಖಂಡರಾದ ರಮೇಶ್ಗೌಡ, ಶಂಕರೇಗೌಡ, ವಕೀಲ ಧನಪಲ್, ದೊಡ್ಡಾಟ್ಟಚಂದ್ರೇಶ್, ಕುಶಾಲ್ ಕುಮಾರ್, ಎ.ಬಿ.ಜಗದೀಶ್, ಚಂದ್ರೇಗೌಡ, ಯೋಗಾನಂದ್, ಮಲ್ಲಿಕಾರ್ಜುನರಾಜು, ಬಿ.ವಿ.ರಾಮಚಂದ್ರ, ದುಶ್ಯಂತ್, ಮಂಜಪ್ಪ, ಎನ್.ಆರ್.ಸುರೇಶ್, ಮಲ್ಲೂರುತಿಮ್ಮೇಶ್, ಮೂರ್ತಣ್ಣ, ರಾಜೀವ್, ವೆಂಕಟೇಶ್, ಜಪ್ರುಲ್ಲಾಖಾನ್ ಇದ್ದರು.