ವಿಜಯವಾಣಿ ವಿಶೇಷ ಬೆಂಗಳೂರು ಗ್ರಾಮಾಂತರ
ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಂಪಿನ ವಾತಾವರಣ ಅರಸಿಕೊಂಡು ಹಾವುಗಳು ಜನವಸತಿ ಪ್ರದೇಶಗಳತ್ತ ಬರುವುದು ಸಾಮಾನ್ಯ. ಅದೇ ರೀತಿ ಜೂನ್ ಹಾಗೂ ಜುಲೈನಲ್ಲಿ ಹಾವುಗಳ ಸಂತಾನೋತ್ಪತ್ತಿ ಕಾಲವೆನಿಸಿದ್ದು, ಹಾವಿನ ಮರಿಗಳು ಹೊರಬರುವ ಸಮಯ. ಈ ಹಿನ್ನೆಲೆಯಲ್ಲಿ ಜನರು ಜಾಗರೂಕರಾಗಿರಬೇಕು ಎಂಬುದು ಉರಗ ತಜ್ಞರ ಎಚ್ಚರಿಕೆಯಾಗಿದೆ.
ಹೌದು! ಇತ್ತೀಚಿಗೆ ಜಿಲ್ಲೆಯ ಅನೇಕ ಕಡೆ ಹಾವಿನ ಮರಿಗಳನ್ನು ಕಂಡ ಜನ ಹೌಹಾರುತ್ತಿದ್ದಾರೆ. ಇದ್ದಕ್ಕಿದ್ದಂತೆ ಎಲ್ಲಿಂದ ಬರುತ್ತಿವೆ, ಹಾವುಗಳು ಎಂಬ ಆತಂಕ ವ್ಯಕ್ತಪಡಿಸುತ್ತಿರುವ ಜನತೆ ಹಾವು ಹಿಡಿಯುವವರಿಗೆ ಕರೆ ಮಾಡುತ್ತಿರುವ ಘಟನೆ ಹೆಚ್ಚುತ್ತಿವೆ. ಇದಕ್ಕೆ ಕಾರಣ ಮಳೆಗಾಲದಲ್ಲಿ ಹಾವುಗಳ ಸಂತಾನೋತ್ಪತ್ತಿ ಹೆಚ್ಚಿರುತ್ತದೆ ಎಂಬುದು ಉರುಗ ತಜ್ಞರ ಅಭಿಪ್ರಾಯ.
ನಿರ್ಮಾಣ ಹಂತದ ಕಟ್ಟಡಗಳ ಬಳಿ ಸುಳಿದಾಟ: ಗ್ರಾಮೀಣ ಪ್ರದೇಶದ ಹೊಲಗದ್ದೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾವುಗಳು ವಸತಿ ಪ್ರದೇಶಗಳಲ್ಲೂ ಹೆಚ್ಚಾಗಿ ಕಂಡುಬರುತ್ತಿವೆ. ಅದರಲ್ಲೂ ಹೊಸ ಬಡಾವಣೆಗಳು, ನಿರ್ಮಾಣ ಹಂತದ ಕಟ್ಟಡಗಳ ಬಳಿ ಹಾವುಗಳ ಸುಳಿದಾಟ ಹೆಚ್ಚಿದೆ. ಗಿಡ-ಗಂಟಿಗಳು ಬೆಳೆದಿರುವ ನಿವೇಶನಗಳು ಹಾವುಗಳ ಆವಾಸಸ್ಥಾನವಾಗಿವೆ. ಆದ್ದರಿಂದ ನಿವೇಶನಗಳಲ್ಲಿ ಗಿಡ-ಗಂಟಿ ತೆರವುಗೊಳಿಸಿ ಸ್ವಚ್ಛವಾಗಿಡಬೇಕು. ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಾಗೆಯೇ ಬಿಲದಂತಹ ಜಾಗ ಕಂಡುಬಂದರೆ ಅದನ್ನು ಮುಚ್ಚಬೇಕು ಎಂದು ಜಿಲ್ಲೆಯಲ್ಲಿ ಹಾವು ಹಿಡಿಯುವ ಅನೇಕರು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ.
65 ದಿನಗಳಲ್ಲಿ ಮರಿ ಹೊರಕ್ಕೆ: ಸಾಮಾನ್ಯವಾಗಿ ಮೊಟ್ಟೆಯೊಡೆದು ಹಾವಿನ ಮರಿಗಳು ಹೊರಬರಲು 60ರಿಂದ 65 ದಿನಗಳು ಬೇಕು. 10ರಿಂದ 15 ದಿನದವರೆಗೆ ಮೊಟ್ಟೆಗಳಿಗೆ ಹಾವುಗಳು ಕಾವುಕೊಡುತ್ತವೆ. ಬಳಿಕ ಮೊಟ್ಟೆಯೊಡೆದು ಹಾವಿನಮರಿಗಳು ಹೊರಬರಲು ಆರಂಭಿಸುತ್ತವೆ. ಏಕಕಾಲಕ್ಕೆ ಅನೇಕ ಮರಿಗಳು ಹೊರಬರುವ ಸಾಧ್ಯತೆ ಇರುವುದರಿಂದ ನಾಲ್ಕೂ ದಿಕ್ಕಿನಲ್ಲೂ ದಿಕ್ಕಾಪಾಲಾಗಿ ಸಂಚರಿಸುತ್ತವೆ. ಸಾಮಾನ್ಯವಾಗಿ ದೊಡ್ಡಹಾವುಗಳು ವಸತಿ ಪ್ರದೇಶದ ಕಡೆ ಸುಳಿಯುವುದು ಕಡಿಮೆ. ಆದರೆ ಮರಿ ಹಾವುಗಳು ಎಲ್ಲೆಂದರಲ್ಲಿ ನುಸುಳುವುದರಿಂದ ವಸತಿ ಪ್ರದೇಶಗಳತ್ತಲೂ ಹೆಚ್ಚಾಗಿ ಕಂಡುಬರುತ್ತವೆ. ಮರಿ ಹಾವುಗಳೂ ವಿಷಪೂರಿತವಾಗಿರುವುದರಿಂದ ಜನತೆ ಎಚ್ಚರಿಕೆ ವಹಿಸಬೇಕು ಎಂಬುದು ಉರಗ ತಜ್ಞರ ಕಿವಿಮಾತು.
ಚಪ್ಪಲಿ ಸ್ಟಾೃಂಡ್‌ಗಳಲ್ಲಿ ಹೆಚ್ಚು: ಸಾಮಾನ್ಯವಾಗಿ ಹಾವಿನ ಮರಿಗಳು ಚಪ್ಪಲಿ ಸ್ಟಾೃಂಡ್‌ಗಳಲ್ಲಿ ವಾಸ್ತವ್ಯ ಹೂಡುತ್ತವೆ, ಆದ್ದರಿಂದ ಚಪ್ಪಲಿ, ಶೂ ಧರಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ನಾನು ಹಿಡಿದ ಅನೇಕ ಮರಿಹಾವುಗಳು ಚಪ್ಪಲಿ ಸ್ಟಾೃಂಡ್‌ಗಳಲ್ಲೇ ಹೆಚ್ಚು ಎನ್ನುತ್ತಾರೆ ನೆಲಮಂಗಲದ ಉರಗತಜ್ಞ ಅರುಣ್‌ರಾಜ್.
ವಿಷ ನಿರೋಧಕ ಚುಚ್ಚುಮದ್ದಿಗೆ ಕೊರತೆ ಇಲ್ಲ: ಹಾವು ಕಡಿತಕ್ಕೆ ಆ್ಯಂಟಿ ಸ್ನೇಕ್ ವೀನೋಮ್ ಎಂಬ ವಿಷನಿರೋಧಕ ಚುಚ್ಚುಮದ್ದು ನೀಡಲಾಗುವುದು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಹಾವು ಕಡಿದ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಇದನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ, ವಿಷಪೂರಿತ ಹಾವು ಕಡಿತದಿಂದ ಮನುಷ್ಯನ ದೇಹದಲ್ಲಿ ರಕ್ತನಾಳದ ಮೂಲಕ ವಿಷ ಹರಡಿ ಸಾವು ಸಂಭವಿಸುವ ಸಾಧ್ಯತೆ ಇರುವುದರಿಂದ ತಡಮಾಡದೆ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗಾಲ ಹಾವುಗಳ ಸಂತಾನೋತ್ಪತ್ತಿಗೆ ಪ್ರಶಸ್ತ. ಇನ್ನು ಎರಡು ತಿಂಗಳು ಹಾವಿನ ಮರಿಗಳು ಹೆಚ್ಚು ಕಾಣಸಿಗುತ್ತವೆ. ಮರಿಹಾವುಗಳು ಎಲ್ಲೆಂದರಲ್ಲಿ ಹರಿದಾಡುತ್ತವೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಕೂಡಲೇ ಉರಗತಜ್ಞರಿಗೆ ಮಾಹಿತಿ ನೀಡಬೇಕು. ಅರುಣ್‌ರಾಜ್, ಉರುಗತಜ್ಞ, ನೆಲಮಂಗಲ