ವಿಜಯಪುರ: ಸಿಂದಗಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಪೊಲೀಸ್ ರು ಅವರಿಂದ 19 ಬೈಕ್ ವಶಕ್ಕೆ ಪಡೆದಿದ್ದಾರೆ.
ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ರಾಮು ಊರ್ಫ್ ರಾಮಚಂದ್ರ ಭೀಮಪ್ಪ ಪಾತ್ರೋಟ (23) ಹಾಗೂ ಇನ್ನೋರ್ವ ಕಾನೂನು ಸಂಘರ್ಷಕ್ಕೆ ಬಳಗಾದ ಬಾಲಕನನ್ನು ಬಂಧಿಸಲಾಗಿದೆ.
ಈ ಇಬ್ಬರು ಆರೋಪಿತರು ವಿಜಯಪುರ, ದೇವರ ಹಿಪ್ಪರಗಿ, ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಏಳನೇ ತರಗತಿ ತೇರ್ಗಡೆ ಯಾದ ಬಾಲಕ ಹಾಗೂ ರಾಮು ಹಣಕಾಸಿನ ತೊಂದರೆಯಿಂದ ಕಳ್ಳತನಕ್ಕೆ ಇಳಿದಿರುವುದಾಗಿ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಎಸ್ ಪಿ ಅನುಪಮ ಅಗರವಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೀಟ್ ಭಗವಂತರಾಯ ಮುಳಸಾವಳಗಿ, ರಾಜೇಶ ಕಟ್ಟಿಮನಿ ಹಾಗೂ ಸುರೇಶ ಕೊಂಡಿ ಗಸ್ತು ತಿರುಗುತ್ತಿರುವಾ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಿಂದಗಿ ಠಾಣೆಯ 9 ಪ್ರಕರಣಗಳು, ಗೋಳಗುಮ್ಮಟ ಠಾಣೆ- 2, ದೇವರಹಿಪ್ಪರಗಿ ಠಾಣೆ- 1, ಇಂಡಿ ಗ್ರಾಮೀಣ ಠಾಣೆ- 1, ಎಪಿಎಂಸಿ-1, ವಿಜಯಪುರ ಠಾಣೆ- 1 ಮಹಾರಾಷ್ಟ್ರ ದ ಸೋಲಾಪುರ ಜಿಲ್ಲೆಯ -1 ಹಾಗೂ ರತ್ನಾಗಿರಿ ಠಾಣೆಯಲ್ಲಿ- 1 ಹೀಗೆ 8.35 ಲಕ್ಷ ರೂ.ಮೊತ್ತದ 19 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ ಪಿ ಅನುಪಮ ಅಗರವಾಲ್ ತಿಳಿಸಿದರು.
ಎಎಸ್ ಪಿ ಡಾ.ರಾಮ ಅರಸಿದ್ದಿ, ಡಿವೈಎಸ್ ಪಿ ಶ್ರೀಧರ ದೊಡ್ಡಿ ಮತ್ತಿತರರಿದ್ದರು.