ಚಿಕ್ಕನಾಯಕನಹಳ್ಳಿ: ಇಂದು ಸಹಕಾರ ಕ್ಷೇತ್ರ ರಾಜಕೀಯ ಕ್ಷೇತ್ರವಾಗಿದೆ. 10 ಜನ ರೈತರ ಪ್ರತಿನಿಧಿಗಳಾಗಿ ಗೆದ್ದರು. ಅಧಿಕಾರದಾಸೆಯಿಂದ ಸರ್ಕಾರದ ನಾಮನಿರ್ದೇಶನ ಮಾಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ನಮ್ಮ ರೈತ ಸಮೂಹದ ಕೆನ್ನೆಯ ಮೇಲೆ ಹೊಡೆದಂತೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ನಂದಿನಿ ಭವನದ ಆವರಣದಲ್ಲಿ ಗುರುವಾರ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. 1983ರಲ್ಲಿ ಈ ಹಾಲು ಒಕ್ಕೂಟದ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ ನಾನು, ಕೆಎಂಎಫ್ನ ಅಧ್ಯಕ್ಷನಾಗಿ ಕುರಿಯನ್ ಅವರೊಂದಿಗೆ ಕೆಲವು ವರ್ಷ ಕೆಲಸ ಮಾಡಿದ್ದೇನೆ. ಅವರು ಪ್ರಜಾಪ್ರುಭತ್ವ ಸಿದ್ಧಾಂತ ಇಟ್ಟುಕೊಂಡು ರೈತರೇ ಈ ಒಕ್ಕೂಟ ನಡೆಸಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಅದರಂತೆ ಇಂದು ಡೇರಿಗಳು ರೈತರಿಗೆ ಸೇರಿವೆ. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೊಂದಿಗೆ ಮಾತನಾಡಿ ಅಂದು ಚುನಾವಣೆಯ ಮೂಲಕ ಅಧ್ಯಕ್ಷನಾಗಿ ಹಾಲಿನ ದರ ಹೆಚ್ಚಿಗೆ ಮಾಡಿದ್ದೆ. ಆದರೆ ಇಂದು ಚುನಾಯಿತ 10 ಜನ ನಿರ್ದೇಶಕರು ಇದ್ದರೂ ನಾಮನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಸಹಕಾರ ಕ್ಷೇತ್ರ ಅಧೋಗತಿಗಿಳಿಯುತ್ತಿದೆ. ಇದನ್ನು ನಾವು ಪ್ರತಿಭಟಿಸುತ್ತೇವೆ ಎಂದು ಜೆಸಿಎಂ ಹೇಳಿದರು.
ಸಹಕಾರಿ ಸಚಿವ ರಾಜೀನಾಮೆ ನೀಡಬೇಕು. ಇಲ್ಲಿಯವರೆಗೆ ಯಾರೂ ಈ ರೀತಿಯಲ್ಲಿ ಅಧ್ಯಕ್ಷರಾಗಿರಲಿಲ್ಲ. ಇಂದು ಸಹಕಾರ ಕ್ಷೇತ್ರಗಳು ಇವರ ಆಸ್ತಿಗಳಾಗುತ್ತಿವೆ. ಇವರ ಹೆಂಡತಿ, ಮಕ್ಕಳೇ ಅಧಿಕಾರದಲ್ಲಿರಬೇಕು. ಇವರ ಅಣ್ಣ&ತಮ್ಮಂದಿರು ಸಂಬಂಧಿಕರ ಹೆಸರಿನಲ್ಲಿ ಸಾಲಗಳು ಇವರ ಸ್ವಂತ ಆಸ್ತಿಗಳಾಗಿವೆ. ಪಿಎಲ್ಡಿ ಬ್ಯಾಂಕ್ ಹಾಳಾಗುತ್ತಿದೆ. ಇನ್ನಾದರೂ ಸಹಕಾರ ಸಂಘಗಳ ಅಸ್ತಿತ್ವ ಉಳಿಸಿಕೊಳ್ಳಬೇಕು. ಸಂಘಶಕ್ತಿ ಕಲಿಯುಗೇ ಎಂಬಂತೆ ಸಂಘಕ್ಕೆ ಶಕ್ತಿ ಇದೆ. ಇಂತಹ ಹಾಲು ಒಕ್ಕೂಟದ ಮೂಲಕ ಜನರ ಆರ್ಥಿಕ ಸ್ಥಿತಿ ಮೇಲೆತ್ತುವ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಅವರಿಗೆ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಬೇಕಿದೆ. ಎಲ್ಲರೂ
ಜವಾಬ್ದಾರಿಯಿಂದ ಕರ್ತವ್ಯ ಮಾಡಿ ಎಂದರು.
ರೈತರ ಐಪಿ ಸೆಟ್ಗಳಿಗೆ ಮೀಟರ್ ಅಳವಡಿಸುವಂತಹ ಸರ್ಕಾರದ ಆಲೋಚನೆ ಬಿಡಬೇಕು. ಐದು ಎಕರೆ ಜಮೀನಿಗೆ ಒಂದು ಪಂಪ್ಸೆಟ್ಗೆ ಮಾತ್ರ ಉಚಿತ, ಇನ್ನು ಹೆಚ್ಚಾಗಿದ್ದರೆ ಮೀಟರ್ ಅಳವಡಿಸುತ್ತೇವೆ ಎಂಬಂತಹ ಯೋಜನೆ ಕೈಬಿಡಬೇಕು. ರೈತರಿಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಎರಡು ಲಕ್ಷದವರೆಗೆ ಟಿಸಿ ಪಡೆಯಲು ರ್ಖಚಾಗುತ್ತಿದೆ. ಇದು ಹೀಗೇ ಮುಂದುವರಿದು
ಐಪಿಸೆಟ್ಗಳಿಗೆ ಮೀಟರ್ ಅಳವಡಿಸಿದರೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೂತನ ತುಮುಲ್ ನಿರ್ದೇಶಕ ಬಿ.ಎನ್.ಶಿವಪ್ರಕಾಶ್ ಮಾತನಾಡಿ, ಅವರ ಮಾರ್ಗದರ್ಶನದಲ್ಲಿ ಈ ಕ್ಷೇತ್ರಕ್ಕೆ ನಾನು ಹೊಸದಾಗಿ ಕಾಲಿಟ್ಟಿದ್ದು, ಈ ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ 120 ಹಾಲು ಒಕ್ಕೂಟ ಸಂಘಗಳು ಇದ್ದು, ಇದರಲ್ಲಿ ಒಟ್ಟು 117 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 23 ಮಹಿಳಾ ಸಂಘಗಳು. ಒಟ್ಟು 22853 ಸದಸ್ಯರಿದ್ದಾರೆ. ಇದರಲ್ಲಿ 7500 ಜನರಿಂದ ಒಟ್ಟು 66,700ಲೀಟರ್ ಹಾಲು ಸರಬರಾಜಾಗುತ್ತಿದ್ದು, 2134825 ರೂ. ಹಣ ಬಟವಾಡೆಯಾಗುತ್ತಿದೆ ಎಂದು ತಿಳಿಸಿದರು.
ಗೆಲುವಿಗೆ ಕಾರಣರಾದ 109 ಜನ ಡೆಲಿಗೇಟ್ಸ್ಗಳಿಗೆ ಸನ್ಮಾನಿಸಿದರು. ಮುಖಂಡರಾದ ನಂದಿಹಳ್ಳಿಶಿವಣ್ಣ, ಶಂಕರಲಿಂಗಯ್ಯ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗಂಗಾಧರ್, ಸ್ವಾಮಿನಾಥ್, ತುಮುಲ್ನ ಅಧಿಕಾರಿಗಳಾದ ಶ್ರೀನಿವಾಸ್, ಚಂದ್ರಶೇಖರ್ ಇದ್ದರು.