ಬೆಳಗಾವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಎಡಿಜಿಪಿ ಭಾಸ್ಕರ ರಾವ್ ಮಾತನಾಡಿದರು. ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಯಶೋದಾ ವಂಟಗೋಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು. 
ಜಿಲ್ಲೆ

ಇದು ನಾಗರಿಕ ನಾಯಕತ್ವದ ಸಮಯ

ಬೆಳಗಾವಿ: ಪ್ರತಿಯೊಬ್ಬರ ಜೀವ ಉಳಿಯಬೇಕು, ಜೀವನವೂ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ನಾಗರಿಕರೇ ಕರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ನಾಯಕತ್ವ ವಹಿಸಿಕೊಳ್ಳಬೇಕಿದೆ ಎಂದು ಎಡಿಜಿಪಿ ಭಾಸ್ಕರ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಸಾರ್ವಜನಿಕರ ಮೇಲೆ ಬಲ ಪ್ರಯೋಗ ಬಿಟ್ಟು ಮನವರಿಕೆ ಮಾಡಬೇಕು.
ಬೇಕಾಬಿಟ್ಟಿ ದಂಡ ವಿಧಿಸುವುದು ಸಮಂಜಸವಲ್ಲ. ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಮಾಸ್ಕ್ ವಿತರಿಸಿ: ಮಾಸ್ಕ್, ಸ್ಯಾನಿಟೈಸರ್ ಹಾಗೂ ದೈಹಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಬೇಕು. ಜನರಬಳಿ ದುಡ್ಡಿಲ್ಲ. ಹೀಗಾಗಿ ಸ್ಥಿತಿವಂತರು ಮಾಸ್ಕ್ ವಿತರಿಸಲು ಮುಂದೆ ಬರಬೇಕು ಎಂದು ಜಿಲ್ಲೆಯ ನಾಗರಿಕರಿಗೆ ಅವರು ಮನವಿ ಮಾಡಿದರು. ಕರೊನಾ ತುರ್ತುಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳು ಸಾಕಷ್ಟು ಬರುತ್ತಿವೆ. ಅವುಗಳಿಗೆಲ್ಲ ಜನರು ಕಿವಿಗೊಡಬಾರದು. ಏನೇ ಸಮಸ್ಯೆ ಇದ್ದರೂ 112 ಸಂಖ್ಯೆಗೆ ಕರೆ ಮಾಡಿ, ಪೊಲೀಸ್ ಸೇವೆ ಬಳಸಿಕೊಳ್ಳಬೇಕು ಎಂದು ಸಾರ್ವಜನಿರಿಗೆ ಮಾಧ್ಯಮಗಳ ಮೂಲಕ ಸೂಚಿಸಿದರು.

ಅನಗತ್ಯ ಸಂಚರಿಸಬೇಡಿ: ಅನಗತ್ಯವಾಗಿ ಹೊರಗೆ ಯಾರೂ ಓಡಾಡಬಾರದು. ಅಂತಹವರ ವಿರುದ್ಧ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ-ವಹಿವಾಟು ಬಂದ್ ಇರಲಿದೆ. ಈಗಾಗಲೇ ನಗರದಲ್ಲಿ 40 ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಅಳವಡಿಸಿ ನಿಗಾ ವಹಿಸಲಾಗುವುದು. ಜಿಲ್ಲಾಡಳಿತ ಎಲ್ಲವನ್ನೂ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದೆ ಎಂದರು.

ಆದೇಶಗಳಿಂದ ಫಲಿತಾಂಶ ಅಸಾಧ್ಯ: ಪೊಲೀಸ್ ಅಧಿಕಾರಿಗಳು ಈವರೆಗೆ ಕಚೇರಿಗಳಲ್ಲಿಯೇ ಕುಳಿತು ಹಲವಾರು ಸಭೆ ಮಾಡಿದ್ದು, ಇನ್ನಾದರೂ
ರಸ್ತೆಗಳಿದು ಕಿರಿಯ ಅಧಿಕಾರಿಗಳ ಜತೆಗೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ಕೆಳಸ್ಥರದ ಸಿಬ್ಬಂದಿಗೆ ಧೈರ್ಯ ಬರುತ್ತದೆ. ಅವರನ್ನು ಹುರಿದುಂದಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಕೇವಲ ಆದೇಶ ಹಾಗೂ ಹುಕುಂಗಳಿಂದ ಕರೊನಾ ಸೋಂಕು ನಿಯಂತ್ರಣ ಅಸಾಧ್ಯ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಹೊಣೆಗಾರಿಕೆ ನಿಭಾಯಿಸಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲೇ ಭಾಸ್ಕರ ರಾವ್ ಅವರು ಇಲಾಖೆಯ ಪ್ರಮುಖ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಹಾನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿಸಿಪಿ ಯಶೋದಾ ವಂಟಗೋಡಿ ಇತರರಿದ್ದರು.

ಸೋಂಕು ತಡೆಯಬೇಕು, ಜನರನ್ನಲ್ಲ

ರಾಜ್ಯದಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಬೇಕೇ ಹೊರತು, ಜನ ಜೀವನವನ್ನಲ್ಲ. ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಬರುವವರೂ ನಮ್ಮವರೇ ಆಗಿದ್ದಾರೆ. ಅವರೊಂದಿಗೂ ಮಾನವೀಯತೆಯಿಂದ ವರ್ತಿಸಬೇಕು. ಅವರು ಯಾವಾಗ ಬೇಕಾದರೂ ಬರಬಹುದು. ಆದರೆ, ಕೋವಿಡ್-19 ನೆಗಟಿವ್ ವರದಿ ಕಡ್ಡಾಯವಾಗಿ ಜತೆಯಲ್ಲೇ ಹೊಂದಿರಬೇಕು. ಗಡಿಯಲ್ಲಿ ತಪಾಸಣೆಯ ಬಳಿಕವೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಜನತೆಯ ಸಹಕಾರವೂ ಬೇಕು. ಮುಸ್ಲಿಂ ಮುಖಂಡರ ಜತೆ ಶುಕ್ರವಾರ ಸಭೆ ನಡೆಸಿ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ತಮ್ಮ ಸಮುದಾಯಕ್ಕೆ ತಿಳಿಸಲು ಸೂಚಿಸಲಾಗಿದೆ. ಶನಿವಾರ ಮತ್ತು ಭಾನುವಾರ ವಿವಿಧ ಮಠ ಹಾಗೂ ಚರ್ಚ್‌ಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಮುಖರೊಂದಿಗೆ ಚರ್ಚಿಸಲಾಗುವುದು ಎಂದು ಎಡಿಜಿಪಿ ಭಾಸ್ಕರ ರಾವ್ ತಿಳಿಸಿದರು.