ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಮ ಪಂಚಾಯಿತಿಯ 17 ಗ್ರಾಮಗಳ ಜನರ ಜೀವನಕ್ಕೆ ಮಾರಕವಾಗಿರುವ ತ್ಯಾಜ್ಯ ನೀರಿನ ಬಗ್ಗೆ ಶಾಸಕ ಧೀರಜ್ ಮುನಿರಾಜು ಬೆಳಗಾವಿ ಅಧಿವೇಶನದಲ್ಲಿ ಎತ್ತಿದ್ದ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇದು ಕೆಐಎಡಿಬಿ ಕರ್ಮಕಾಂಡವಾಗಿದೆ, ಸಮಸ್ಯೆ ಗಂಭೀರವಾಗಿದ್ದು, ಇದನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರಿನ ಬಗ್ಗೆ ಧೀರಜ್ ಮುನಿರಾಜು ಸರ್ಕಾರದ ಗಮನಸೆಳೆದರು. ಬಾಶೆಟ್ಟಿಹಳ್ಳಿಯ ಅಪರೆಲ್ ಪಾರ್ಕ್‌ನಲ್ಲಿ ಕೈಗಾರಿಕೆಗಳಿಂದ ಹೊರ ಬರುವ ತ್ಯಾಜ್ಯ ನೀರು ವಿಲೇವಾರಿ ಮಾಡಲು ಸಿಇಟಿಪಿ ಮತ್ತು ಎಸಿಟಿಪಿ ನಿರ್ಮಾಣ ಮಾಡಲಾಗಿದೆ. ಆದರೆ ಅಪರೆಲ್ ಪಾರ್ಕ್ ಪ್ರಾರಂಭವಾಗಿ 18 ವರ್ಷವಾದರೂ ಇಲ್ಲಿಯವರೆಗೂ ಸಿಇಟಿಪಿ ಮತ್ತು ಎಸ್ ಇಟಿಪಿ ಕಾರ್ಯಾರಂಭ ಮಾಡಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಶ್ನೆ ಮಾಡಿದಾಗ ಸರ್ಕಾರದಿಂದ ಬಂದ ಉತ್ತರದಲ್ಲಿ ಖಾಸಗಿ ಕಂಪನಿಯ ಒಡಂಬಡಿಕೆಯಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಲಾಗುತ್ತಿದೆ, ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂಬ ಉತ್ತರ ಬಂದಿದೆ ಎಂದರು, ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ, 2 ಗ್ರಾಮ ಪಂಚಾಯಿತಿ 17 ಗ್ರಾಮಗಳಲ್ಲಿ ಅಂತರ್ಜಲ ನೀರು ಕಲುಷಿತಗೊಂಡು ಟ್ಯಾಂಕರ್ ಮೂಲಕ ಜಕ್ಕಲಮಡು ನೀರನ್ನು ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದರು.
ಕಂದಾಯ ಸಚಿವರು ಮಾತನಾಡಿ, ಶಾಸಕರು ಹೇಳಿದ ಮಾತು ಸತ್ಯ, ಅಧಿಕಾರಿಗಳು ಸರ್ಕಾರಕ್ಕೆ ನೀಡಿದ ಮಾಹಿತಿ ಮೇರೆಗೆ ಸರ್ಕಾರ ಉತ್ತರ ನೀಡಿದೆ, ಇದೊಂದು ಕೆಐಎಡಿಬಿ ಕರ್ಮಕಾಂಡವಾಗಿದೆ ಎಂದು ಪುನರುಚ್ಚರಿಸಿದರು. ಅಧಿವೇಶನದಲ್ಲಿ ಚರ್ಚೆ ಮಾಡಿ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ, ಅದನ್ನು ಖರ್ಚು ಮಾಡುತ್ತಾರೆ, ಆದರೆ ಸಿಇಟಿಪಿ ಮತ್ತು ಎಸ್‌ಟಿಪಿ ಪ್ರಾರಂಭಿಸಲು ಸಾಧ್ಯವಾಗಿಲ್ಲ, ಇದರಿಂದ ಕಲುಷಿತ ನೀರು ಶುದ್ಧೀಕರಣವಾಗದೆ ನೇರವಾಗಿ ಕೆರೆಗಳಿಗೆ ಸೇರುತ್ತಿದೆ, ಇದರಿಂದ ಕೆರೆ ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಕಲುಷಿತಗೊಂಡಿದೆ, ಬೋರ್‌ವೇಲ್ ಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ, ಆ ಕಾರಣದಿಂದ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಶಾಸಕರ ಸಮ್ಮುಖದಲ್ಲಿ ಸಭೆ: ಕೈಗಾರಿಕೆಗಳ ತ್ಯಾಜ್ಯ ನೀರು ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿ ಕೆಐಎಡಿಬಿ ಮೇಲಿದೆ, ಖಾಸಗಿ ಕಂಪನಿಯವರು ತ್ಯಾಜ್ಯ ನೀರನ್ನು ವಿಲೇವಾರಿ ಮಾಡುತ್ತಿಲ್ಲ, ಅಲ್ಲಿನ ಸಮಸ್ಯೆ ಗಂಭೀರವಾಗಿದ್ದು, ಶಾಸಕರ ನೇತೃತ್ವದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಐಎಡಿಬಿ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವರ ಗಮನಕ್ಕೂ ತರುವುದಾಗಿ ಸಚಿವರು ತಿಳಿಸಿದರು.