ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದ ಬಾಲೆಹೊಸೂರ ರಸ್ತೆಯ ಇಕ್ಕೆಲದಲ್ಲಿ ಚರಂಡಿ ಮತ್ತು ಮಳೆ ನೀರು ಹರಿದು ಹೋಗುವ ಮಾರ್ಗವನ್ನು ಶುಕ್ರವಾರ ಜೆಸಿಬಿ ಬಳಸಿ ಸ್ವಚ್ಛಗೊಳಿಸುವ ಮೂಲಕ ಮೂರು ದಶಕಗಳ ಸಮಸ್ಯೆಯನ್ನು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಪರಿಹರಿಸಿದರು.
ಗ್ರಾಮದ ಬಾಲೆಹೊಸೂರ ರಸ್ತೆ ಬದಿಯ ಚರಂಡಿಗಳ ನೀರು ಹರಿದು ಹೋಗದಿರುವುದರಿಂದ ಅಲ್ಲಿ ಕೊಳಗೇರಿ ನಿರ್ವಣವಾಗಿತ್ತು. ಮಳೆ ಇಲ್ಲವೆ ನಲ್ಲಿ ನೀರು ಬಿಟ್ಟಾಗ ಚರಂಡಿ ತುಂಬಿ ರಸ್ತೆ ಮೇಲೆ ನೀರು ನಿಲ್ಲುತ್ತಿತ್ತು. ಇದರಿಂದ ಈ ಪ್ರದೇಶ ರೋಗ ರುಜಿನಗಳ ತಾಣವಾಗಿತ್ತು. ಚರಂಡಿಯ ಪಕ್ಕದಲ್ಲಿಯೇ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿವೆ. ಚರಂಡಿ ದುರ್ನಾತದಿಂದ ಮಕ್ಕಳ ನಿತ್ಯದ ಕಲಿಕೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿತ್ತು. ಈ ಕುರಿತು ಗ್ರಾಮಸ್ಥರು, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆಗ ಸಮಸ್ಯೆ ಬಗೆಹರಿಸಲು ಗ್ರಾಪಂನವರು ಮುಂದಾಗುತ್ತಿದ್ದಂತೆಯೇ ಚರಂಡಿ ನೀರು ನಿಲ್ಲುವ ಪಕ್ಕದ ಜಮೀನಿಗಳ ರೈತರು, ಆಶ್ರಯ ನಿವಾಸಿಗರು ಇದಕ್ಕೆ ಅಡ್ಡಿ ಮಾಡುತ್ತಿದ್ದರು. ಕಳೆದ 6 ತಿಂಗಳ ಹಿಂದೆ ತಹಸೀಲ್ದಾರರೇ ಖುದ್ದಾಗಿ ಸ್ಥಳಕ್ಕೆ ಹೋಗಿ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ.
ಸದ್ಯ ಚರಂಡಿ ನೀರು ಹರಿದು ಹೋಗುವ ಮಾರ್ಗವನ್ನು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಶುಕ್ರವಾರ ಮತ್ತೊಮ್ಮೆ ಪರಿಶೀಲಿಸಿದರು. ಈ ಮೊದಲೇ ಸರ್ವೆ ಇಲಾಖೆಯಿಂದ ನೀರು ಹರಿದು ಹೋಗುವ ಮೂಲ ಮತ್ತು ನೈಸರ್ಗಿಕವಾಗಿ ಹರಿಯುವ ಮಾರ್ಗದ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಗ್ರಾಪಂ, ತಾಪಂ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಚರಂಡಿ ನೀರು ಹರಿದು ಹೋಗುವ ಮಾರ್ಗವನ್ನು ಜೆಸಿಬಿ ಬಳಸಿ ತೆರವುಗೊಳಿಸಿದರು.
ಬಳಿಕ ಪ್ರತಿಕ್ರಿಯಿಸಿದ ತಹಸೀಲ್ದಾರ್ ಅವರು, ನೀರು ಹರಿದು ಹೋಗುವ ನೈಸರ್ಗಿಕ ಮಾರ್ಗದಲ್ಲಿ ಕಾಲುವೆ ತೋಡಿ ಗ್ರಾಮದ ನೀರು ಹಳ್ಳ ಸೇರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಚರಂಡಿ ನೀರು ಹೊರ ಹೋಗಲು ಶಾಶ್ವತ ಪರಿಹಾರಕ್ಕಾಗಿ ತಾಲೂಕಾಡಳಿತ ದಿಟ್ಟ ನಿರ್ಧಾರ ಕೈಗೊಂಡಿದ್ದು, ಗ್ರಾಮಸ್ಥರು ಅಡ್ಡಿಪಡಿಸದೇ ಸಹಕಾರ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಶಶಿಕಾಂತ ದಾಸರ ಮನವಿ ಮಾಡಿದರು.
ಈ ವೇಳೆ ಸಿಪಿಐ ಆರ್.ಎಚ್. ಕಟ್ಟಿಮನಿ, ಪಿಎಸ್ಐ ಶಿವಯೋಗಿ ಲೋಹಾರ, ಪಿಡಿಒ ಎಫ್.ಎಸ್. ಹಿರೇಮಠ, ಎಸ್.ಎಫ್. ಹಳ್ಯಾಳ, ಗ್ರಾಪಂ ಸದಸ್ಯರಾದ ಶರಣಪ್ಪ ಇಚ್ಚಂಗಿ, ಸೋಮಶೇಖರ ಲಮಾಣಿ, ಬಸವರಾಜ ಇಟಗಿ, ಬಾಬು ಲಮಾಣಿ, ಇತರರಿದ್ದರು.
ಮೂರು ದಶಕಗಳ ಸಮಸ್ಯೆಗೆ ತಾಲೂಕಾಡಳಿತ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಚರಂಡಿ ನೀರು ಹಳ್ಳ ಸೇರುವ ಮಾರ್ಗದವರೆಗೆ ಕಾಂಕ್ರೀಟ್ ಚರಂಡಿ ನಿರ್ವಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಪಂ ಸಿಇಒ ಅವರಿಂದ ವಿಶೇಷ ಅನುಮತಿ ಪಡೆಯಲಾಗುವುದು. | ಡಾ. ಎನ್. ಎಚ್. ಓಲೇಕಾರ ತಾಪಂ ಇಒ