ಮೈಸೂರು: ಇತಿಹಾಸದಲ್ಲಿಯೂ ಮಹಿಳೆಯರ ಸಾಧನೆ ಕುರಿತು ಸರಿಯಾದ ಉಲ್ಲೇಖವಿಲ್ಲ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆ ಕಾಣುತ್ತಿದ್ದರೂ ಸೂಕ್ತ ಮನ್ನಣೆ ಇನ್ನೂ ದೊರಕಬೇಕಿದೆ ಎಂದು ಬೆಂಗಳೂರಿನ ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಜಿಲ್ಲಾ ಕದಳಿ ಮಹಿಳಾ ಸಮಾವೇಶ ‘ಸಮರ್ಥ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಬ್ರಿಟಿಷರ ಇತಿಹಾಸ ಪುಸ್ತಕಗಳ ಹೊರತಾಗಿ ವಿಜಯನಗರ ಸಾಮ್ರಾಜ್ಯ ಇತಿಹಾಸ ಅವಲೋಕಿಸಿದರೆ ಅಲ್ಲಿ ಇಡೀ ಆಡಳಿತ ವ್ಯವಸ್ಥೆಯನ್ನು ಮಹಿಳೆಯರು ನೋಡಿಕೊಳ್ಳುತ್ತಿದ್ದರು ಎಂಬುದನ್ನು ‘ಮರೆಯಲಾಗದ ಸಾಮ್ರಾಜ್ಯ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅದೇ ಬ್ರಿಟಿಷರು ಬರೆದಿರುವ ಪುಸ್ತಕದಲ್ಲಿ ಕೃಷ್ಣದೇವರಾಯನಿಗೆ ಸಾವಿರ ದಾಸಿಯರಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ನಿಜವಾದ ಸಂಗತಿ ಆ ಸಾವಿರ ಮಹಿಳೆಯರು ಇಡೀ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು ಎಂದು ವಿಶ್ಲೇಷಿಸಿದರು.
ದೇಶದ ದೊಡ್ಡ ಯೋಜನೆಗಳಲ್ಲಿ ಒಂದಾದ ಮಂಗಳಯಾನದಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದವರು. ಮಹಿಳಾ ವಿಜ್ಞಾನಿಗಳು. ಆದರೆ ಅದು ಹೆಚ್ಚು ದಾಖಲೆ ಆಗಲಿಲ್ಲ. ಮಂಗಳಯಾನದ ನೂರನೇ ದಿನವನ್ನು ಅದಮ್ಯ ಚೇತನದಿಂದ ಆಚರಿಸಿ ಕೃತಜ್ಞತೆ ಸಲ್ಲಿಸಲಾಯಿತು. ಹಾಗಾಗಿ ಮಹಿಳೆಯ ಸಾಧನೆಯನ್ನು ಇತಿಹಾಸ ಪುಟದಲ್ಲಿ ಸರಿಯಾಗಿ ದಾಖಲಿಸುವ ಕಾರ್ಯ ಅಗಬೇಕು ಎಂದು ಅಭಿಪ್ರಾಯಪಟ್ಟರು.
12ನೇ ಶತಮಾನದಲ್ಲಿ ತಾವೊಬ್ಬ ಮಹಿಳಾ ಆಧ್ಯಾತ್ಮಿಕ ಚಿಂತಕಿಯಾಗಿ ಧರ್ಮದ ಚಿಂತನೆ ಜತೆಗೆ ಮಹಿಳಾ ಸ್ವಾತಂತ್ರ್ಯ ಸಮಾನತೆ ಬಗ್ಗೆ ದನಿ ಎತ್ತಿದವರು ಅಕ್ಕ ಮಹಾದೇವಿ. ಅವರ ಜೀವನ ಚರಿತ್ರೆ ತಿಳಿದುಕೊಂಡು ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವಯಂ ಉದ್ಯೋಗ, ಕೌಶಲಾಧಾರಿತ ತರಬೇತಿಗಳು ಮಹಿಳೆಯರಿಗೆ ಬೇರೆ, ಪುರುಷರಿಗೆ ಬೇರೆ ಎನ್ನುವಂತಾಗಿದೆ. ಮಹಿಳೆಯರು ಬ್ಯೂಟಿಷಿಯನ್ ಕೋರ್ಸ್ ಮಾಡಿದರೆ, ಪುರುಷರು ಮೊಬೈಲ್, ಕಂಪ್ಯೂಟರ್ ರಿಪೇರಿ ಕೋರ್ಸ್ ಮೀಸಲು ಎನ್ನುವಂತಾಗಿದೆ. ಮಹಿಳೆಯರು ಆತ್ಮ ವಿಶ್ವಾಸ ಬೆಳೆಸಿಕೊಂಡು ಎಲ್ಲ ಕ್ಷೇತ್ರದಲ್ಲಿಯೂ ಕೌಶಲ ಬೆಳೆಸಿಕೊಳ್ಳಬೇಕು. ಈ ಮೂಲಕ ಜೀವನದಲ್ಲಿ ಮುಂದೆ ಬರಬೇಕು ಎಂದರು.
ಪ್ಲಾಸ್ಟಿಕ್ ಪಡೆಂಭೂತದ ಬಳಿಕ ಈಗ ಮೈಕ್ರೋ ಪ್ಲಾಸ್ಟಿಕ್ ಎಂಬ ಮತ್ತೊಂದು ಪಡೆಂಭೂತ ಮುಂದೆ ಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ ಉಪ್ಪಿನಲ್ಲೂ ಇದು ಕಾಣಿಸಿಕೊಳ್ಳುತ್ತಿದೆ ಎನ್ನುವ ಆತಂಕವನ್ನು ಮುಂಬೈನ ಐಐಟಿ ಹೊರ ಹಾಕಿದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಪರಿಸರ ನಾಶವಾಗುತ್ತಿದ್ದು, ಆಮ್ಲಜನಕ ಕೊರತೆ ಎದುರಾಗುವ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಗೆ ಏಳು ಮರಗಳ ಅವಶ್ಯಕತೆ ಇದೆ ಎಂದು ಅಧ್ಯಯನ ಹೇಳುತ್ತದೆ. ಆದರೆ ಬೆಂಗಳೂರಿನಲ್ಲಿ ಏಳು ಜನರಿಗೆ ಒಂದು ಮರ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪರಿಸರ ಕಾಳಜಿ ಎಲ್ಲರಲ್ಲಿಯೂ ಇರಬೇಕು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಗೊ.ರು.ಚನ್ನಬಸಪ್ಪ ಅವರು ‘ಧಾರಿಣಿ’ ಸವಿ ಸಂಚಿಕೆ ಬಿಡುಗಡೆ ಮಾಡಿದರು. ಪರಿಷತ್‌ನ ಅಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಎಡೆಯೂರು ತೋಂಟದಾರ್ಯ ಮಠದ ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲಕರಾದ ಸುಶೀಲಾ ಸೋಮಶೇಖರ್ ಇದ್ದರು.