ಹಾಸನ: ಹಾಸನ: ಪ್ರಸ್ತುತದಲ್ಲಿ ಮಹಿಳೆ ಎಲ್ಲಾ ರಂಗದಲ್ಲೂ ಕಾಲಿಟ್ಟಿದ್ದಾರೆ. ಆದರೆ ಇತಿಹಾಸ ಗೊತ್ತಿಲ್ಲದಿದ್ದರೇ ಯಾವ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ಕವಯತ್ರಿ ಸವಿತಾ ನಾಗಭೂಷಣ್ ಸಲಹೆ ನೀಡಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ ಮತ್ತು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಮತ್ತು ಕವಿ, ಕಾವ್ಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಇದ್ದರೆ ಜಗತ್ತು. ಜಗತ್ತು ಇದ್ದರೆ ಎಲ್ಲವೂ ಇರುತ್ತದೆ. ವರ್ಷದಲ್ಲಿ ಒಂದು ದಿನ ಮಾತ್ರ ಮಹಿಳಾ ದಿನ ಆಚರಿಸುವುದಲ್ಲ ಬದಲಿಗೆ ಪ್ರತಿದಿನವು ಮಹಿಳಾ ದಿನಾಚರಣೆ ನಡೆಯುತ್ತಲೆ ಇರುತ್ತದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಮಹಿಳೆ ಮತ್ತು ಪುರುಷರಲ್ಲಿ ತುಂಬಾ ತಾರತಮ್ಯವಿತ್ತು. ಗಂಡು-ಹೆಣ್ಣು ಎನ್ನುವ ಭೇದ-ಭಾವ ಮಾಡುತ್ತಿದ್ದರು. ಈಗ ಎಲ್ಲಾ ಬದಲಾಗಿದೆ. ಗಂಡಿನಂತೆ ಹೆಣ್ಣು ಕೂಡ ಎಲ್ಲಾ ರಂಗದಲ್ಲೂ ಕಾಲಿಟ್ಟಿದ್ದಾಳೆ. ನಾವು ಎಲ್ಲಿಂದ ಬಂದಿದ್ದೇವೆ. ಹೇಗೆ ನಡೆದು ಬಂದಿದ್ದೇವೆ ಎನ್ನುವ ಇತಿಹಾಸ ಯುವತಿಯರಿಗೆ ಗೊತ್ತಿರಬೇಕು. ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಹಿರಿದು. ಹಲವು ಜವಾಬ್ದಾರಿಯನ್ನು ನಿಭಾಯಿಸಿ ಕುಟುಂಬವನ್ನು ಮುನ್ನಡೆಸುವ ಶಕ್ತಿ ಮಹಿಳೆಯಲ್ಲಿದೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಮಾತನಾಡಿ, ಸಮಾಜದಲ್ಲಿ ಮಹಿಳೆ ಒಂದು ಕಡೆ ಅಭಿವೃದ್ಧಿ ಹೊಂದಬೇಕು, ಬೆಳೆಯಬೇಕು ಎಂದರೆ ಇನ್ನೊಂದು ಕಡೆ ಹತ್ತಿಕ್ಕುವ ಕೆಲಸ ಆಗುತ್ತಿದೆ. ಎಲ್ಲಾ ಕಾಲದಲ್ಲೂ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದ್ದಾರೆ. ಮೊದಲ ತಲೆಮಾರಿನ ಮತ್ತು ಈಗಿನ ತಲೆಮಾರಿನ ಸಾಹಿತ್ಯಕ್ಕೂ ವ್ಯತ್ಯಾಸವಿದೆ. ವಿದ್ಯಾರ್ಥಿಗಳು ಗ್ರಹಿಸುತ್ತಲೇ ಸಾಹಿತ್ಯ ಬರೆಯಬೇಕು. ಇಂದು ಕಾವ್ಯ, ಕಥೆ, ಕಾದಂಬರಿ ಎಲ್ಲಾ ಬದಲಾಗಿದೆ. ಮಹಿಳೆಯ ಮುಂದಿರುವ ಸವಾಲುಗಳು, ವರ್ತಮಾನಗಳು ಹೇಗೆ ಬರೆಯಬೇಕು ಎಂಬುದನ್ನು ತೋರಿಸುತ್ತದೆ. ಸಾಹಿತ್ಯ ಬರೆಯಬೇಕಾದರೆ ಯೋಚಿಸಿ ಬರೆಯಬೇಕಾಗಿದೆ. ಸಂವಿಧಾನ ಕಾನೂನು ಬಗ್ಗೆ ಯೋಚಿಸಬೇಕಾಗಿದೆ. ಧರ್ಮ ರಾಜಕಾರಣದ ಬಗ್ಗೆ ಎಲ್ಲಾ ಚರ್ಚೆಗಳು ನಡೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಿ ಗೋಷ್ಠಿ ಹಾಗೂ ಕಾವ್ಯಗಳ ಬಗ್ಗೆ ಹಿರಿಯ ಮತ್ತು ಯುವ ಕವಿಗಳಿಂದ ಸಂವಾದ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ರೂಪಾ ಹಾಸನ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಕೆ.ಜಿ. ಕವಿತಾ, ಶ್ರೀರಂಗ ವಿದ್ಯಾಸಂಸ್ಥೆ ಪ್ರಾಂಶುಪಾಲ ನವೀನ್, ಕಸಾಪದ ಜಯರಾಂ, ಜೆ.ಆರ್. ಕೆಂಚೇಗೌಡ, ಬೊಮ್ಮೇಗೌಡ, ಪ್ರಸನ್ನಕುಮಾರ್, ಶೈಲಜಾ ಹಾಸನ್, ರಾಜೇಶ್ವರಿ ಹುಲ್ಲೇನಹಳ್ಳಿ, ವನಜಾ ಸುರೇಶ್, ಸರ್ವಮಂಗಳಾ ಇತರರು ಉಪಸ್ಥಿತರಿದ್ದರು.