ಬೇಲೂರು: ಪೇಸಿಎಂ ಅಭಿಯಾನದಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆಯೇ ಹೊರತು ಬಿಜೆಪಿ ಸರ್ಕಾರಕ್ಕಾಗಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗೌರವಕ್ಕಾಗಲಿ ಕುಂದುಂಟಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದರು.
ಪಟ್ಟಣದಲ್ಲಿ ಸೋಮವಾರ ರಾತ್ರಿ ಆರಂಭವಾದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಯಡಿಯೂರಪ್ಪನವರು ಸುದ್ದಿಗಾರರೊಂದಿಗೆ ಮಾತನಾಡಿ, ಏನೇ ಸಮಸ್ಯೆ ಇದ್ದರೂ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಬಹುದಿತ್ತು. ಆದರೆ ಕಾಂಗ್ರೆಸ್ ಪಕ್ಷವು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ಕರ್ನಾಟಕದಲ್ಲಿ ಅಲ್ಪಸ್ವಲ್ಪ ಉಸಿರಾಡುತ್ತಿದೆ. ಈಗ ಪೇಸಿಎಂ ನಂತರ ಅತಿರೇಕದ ವರ್ತನೆಯಿಂದ ರಾಜ್ಯದಲ್ಲೂ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲಿದೆ. ಕಾಂಗ್ರೆಸ್ ನಾಯಕರು ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿರುವುದಾಗಿ ಅವರದೇ ಪಕ್ಷದ ರಮೇಶ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ರಾಜ್ಯದ ಜನ ಚರ್ಚೆ ನಡೆಸಬೇಕು ಎಂದು ವ್ಯಂಗ್ಯವಾಡಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೋಲಿನ ಭೀತಿಯಿಂದ ತೀರಾ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಮೊದಲು ಗೌರವ ಕೊಡುವುದನ್ನು ಕಲಿಯಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 140 ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಸಿದ್ದರಾಮಯ್ಯನವರು ಮೊದಲು ತಮ್ಮ ಕ್ಷೇತ್ರ ಯಾವುದು ಎಂಬುದನ್ನು ಗಟ್ಟಿ ಮಾಡಿಕೊಳ್ಳಲಿ, ನಂತರ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮಾತನಾಡಲಿ. ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯನವರು ಆ ಸ್ಥಾನದ ಘನತೆಗೆ ಕುಂದು ಬಾರದ ರೀತಿ ನಡೆದುಕೊಳ್ಳುವುದನ್ನು ಮೊದಲು ಕಲಿಯಲಿ. ಸಂಘ ಪರಿವಾರದ ಕುರಿತು ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಡರ್ಟಿ ಪಾಲಿಟಿಕ್ಸ್ ಮಾಡುತ್ತಿರುವುದು ಕಾಂಗ್ರೆಸ್‌ನವರು, ಸಂಘ ಪರಿವಾರ ಅಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಯ ಎಲ್ಲ ಮುಖಂಡರು ತಂಡವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ. ಮೋದಿ ನಾಯಕತ್ವದಲ್ಲಿ ಜನರಿಗೆ ವಿಶ್ವಾಸ ಇದೆ. ಹಾಸನ ಜಿಲ್ಲೆಯಲ್ಲೂ ಹೆಚ್ಚು ಸ್ಥಾನ ಗೆಲ್ಲುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.