ಜಿಲ್ಲೆ

ಇಟ್ಟಿಕೆರೆ ದಂಡೆ ಮೇಲಿನ ಅಂಗಡಿ ತೆರವು

ಲಕ್ಷ್ಮೇಶ್ವರ: ಪಟ್ಟಣದ ಕೇಂದ್ರ ಭಾಗದಲ್ಲಿರುವ ಇಟ್ಟಿಕೆರೆ ದಂಡೆಯ ಮೇಲಿನ ಅಂಗಡಿಗಳನ್ನು ಸೋಮವಾರ ಪುರಸಭೆಯವರು ತೆರವುಗೊಳಿಸಿದರು. ಅನೇಕ ವರ್ಷಗಳಿಂದ ಚಹಾ ಅಂಗಡಿ, ಪಾನಶಾಪ್ ಇತರೆ ವ್ಯಾಪಾರದ ಮೂಲಕ ಬದುಕು ಸಾಗಿಸುತ್ತಿದ್ದ ವ್ಯಾಪಾರಸ್ಥರು ಪುರಸಭೆಯವರ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಪುರಸಭೆ ವ್ಯಾಪ್ತಿಯಲ್ಲಿನ ಕೆರೆಗಳ ಒತ್ತುವರಿ ತಡೆ, ಸಂರಕ್ಷಣೆ, ಹಸಿರೀಕರಣಕ್ಕೆ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಲ್ಲದೆ, ಪುರಸಭೆಯಲ್ಲಿ ಲಭ್ಯವಿರುವ ಅನುದಾನ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಕಾರದಿಂದ ಕೆರೆ ಅಭಿವೃದ್ಧಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಕೆರೆಯ ದಕ್ಷಿಣ ಭಾಗದಲ್ಲಿನ ಪಾಳಾ-ಬಾದಾಮಿ ರಸ್ತೆಯಂಚಿನ ಕೆರೆ ದಂಡೆಯ ಅಗಲೀಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಕೆರೆಯ ಸುತ್ತಲಿನ ಪ್ರದೇಶದಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಕೆರೆ ಅಭಿವೃದ್ಧಿಯ ಕಾರ್ಯಕ್ಕೆ ಸಾರ್ವಜನಿಕರ, ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ ಎಂದರು.

ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಪ್ರತಿಕ್ರಿಯಿಸಿ, ಕೆರೆ ಅಭಿವೃದ್ಧಿ ಮಾಡುವ ಉದ್ದೇಶದಿಂದ ಕೈಗೊಂಡ ಒತ್ತುವರಿ ತೆರವು ಕಾರ್ಯ ಶ್ಲಾಘನೀಯ. ಆದರೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎನ್ನುವಂತಾಗಬಾರದು. ಮೊದಲು ಕೆರೆಯ ಮೂಲ ವಿಸ್ತೀರ್ಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಕೆರೆಗೆ ನದಿ ನೀರು ಹರಿಸುವ ಯೋಜನೆ ಕಾರ್ಯ ಪ್ರಗತಿ ಹಂತದಲ್ಲಿದ್ದು, ಈಗ ಇರುವ ಕೆರೆ ಪ್ರದೇಶದ ವಿಸ್ತೀರ್ಣ ಹೆಚ್ಚಿಸಬೇಕು. ಸದ್ಯ ಉಳಿದಿರುವುದು 13 ಎಕರೆ ಮಾತ್ರ ಅದಕ್ಕಾಗಿ ಕಳೆದ 2 ವರ್ಷಗಳ ಹಿಂದೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಕೆರೆ

ಅಂಚಿನಲ್ಲಿರುವ ಪ್ರದೇಶ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಅಲ್ಲದೆ, ಮಾಲ್ಕೀ ಆಸ್ತಿಯಾಗಿದ್ದರೂ ಮಾಲೀಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.