ಜಿಲ್ಲೆ

ಇಟಗಿಯಲ್ಲಿ ಕೆರೆ ನಿರ್ಮಿಸಿ

ಕಂಪ್ಲಿ: ಕೆರೆ ನಿರ್ಮಿಸಿ ನೀರಾವರಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಜೆ.ಎನ್.ಗಣೇಶ್‌ಗೆ ಇಟಗಿ ಗ್ರಾಮದ ರೈತರು ಭಾನುವಾರ ಮನವಿ ಸಲ್ಲಿಸಿದರು.

ಇಟಗಿಯಲ್ಲಿ ಕೆಕೆಆರ್‌ಡಿಬಿಯ 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಮನವಿ ಸಲ್ಲಿಸಿದರು. ಎಮ್ಮಿಗನೂರು ಕಾಲುವೆಯಿಂದ ಗ್ರಾಮದ ಕಡೆ ಇರುವ ವಿತರಣಾ ನಾಲೆಗಳು ಮುಚ್ಚಿ ಹೋಗಿವೆ. ಇಟಗಿ ನಾಲೆಯ ಕೊನೆಯ ಭಾಗದಲ್ಲಿದ್ದು ನೀರು ಹರಿದು ಬರದೆ ತೊಂದರೆಯಾಗಿದೆ ಎಂದು ದೂರಿದರು.

ತುಂಗಭದ್ರಾ ನದಿ ಗ್ರಾಮದ ಅಂಚಿಗೆ ಹರಿಯುತ್ತಿದ್ದು, ರೈತರ ಅನುಕೂಲಕ್ಕಾಗಿ ಕೆರೆ ನಿರ್ಮಿಸಿ, ಕೆರೆಗೆ ನದಿ ನೀರನ್ನು ಹರಿಸಬೇಕು. ಇದರಿಂದ ನೂರಾರು ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗುತ್ತದೆ ಎಂದು ಗ್ರಾಮದ ರೈತರಾದ ಹಗೆದಾಳ್ ವೀರೇಶ್, ಹರಿಜನ ಗಾಳೆಪ್ಪ, ಸಿರಿಗೇರಿ ಬಸವರಾಜ, ತಳವಾರ ತಿಮ್ಮಪ್ಪ, ಸೂಡೆಪ್ಪ, ಜಡೆಯಲ್ಲ, ಮಳೆ ರುದ್ರಪ್ಪ, ನಿಂಗಪ್ಪ, ಸಿದ್ದಪ್ಪ ಇತರರು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಜೆ.ಎನ್.ಗಣೇಶ್ ಮಾತಮಾಡಿ, ಕೆರೆ ನಿರ್ಮಾಣಕ್ಕೆ ರೈತರು ಕನಿಷ್ಟ 5ಎಕರೆ ಭೂಮಿ ನೀಡಿದಲ್ಲಿ ಕೆರೆ ನಿರ್ಮಿಸಿ, ನೀರು ತುಂಬಿಸುವ ಕಾಮಗಾರಿ ಕೈಗೆತ್ತಿಕೊಳ್ಳುತ್ತೇನೆ. ಭೂಮಿ ಕೊಡುವಲ್ಲಿ ರೈತರು ಮುಂದಾಗಬೇಕು ಎಂದು ತಿಳಿಸಿದರು.