ನಾಪೋಕ್ಲು: ಪಾಡಿ ಇಗ್ಗುತಪ್ಪ ದೇವಾಲಯಕ್ಕೆ ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ಅವರು ಸಂಸದರ ಅನುದಾನ ಹಾಗೂ ಸ್ವಂತ ಹಣದಲ್ಲಿ ನಿರ್ಮಿಸಿಕೊಟ್ಟ ವಿಶಾಲವಾದ ಪೌಳಿ, ಬೋಧನಾ ಕಟ್ಟಡವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಉದ್ಘಾಟಿಸಿದರು.
ಕೊಡಗಿನವರ ಆರಾಧ್ಯ ದೈವ ಇಗ್ಗುತಪ್ಪ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಹಿಂದೆ ನಿರ್ಮಿಸಿದ ಕಟ್ಟಡವನ್ನು ಸರ್ಕಾರದ ವತಿಯಿಂದ ದುರಸ್ತಿ ಮಾಡಲಾಗುವುದು ಎಂದು ಅವರು ಹೇಳಿದರು.
ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ಮಾತನಾಡಿ, ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ನಾಡಿನ ಸುಭಿಕ್ಷೆಗೆ ಪ್ರಾರ್ಥಿಸಲಾಗಿದೆ. ದೇವಾಲಯದ ಅಭಿವೃದ್ಧಿಗೆ ಮಾಜಿ ಸಂಸದ ಸಿ.ಎಸ್ ಪುಟ್ಟರಾಜು ಅವರ ಸಹಕಾರವೂ ಇರುವುದಾಗಿ ತಿಳಿಸಿದರು.
ಪೌಳಿ ಉದ್ಘಾಟನೆಯ ಅಂಗವಾಗಿ ಮಂಗಳವಾರ ಸಂಜೆ ಆಶ್ಲೇಷ ಬಲಿ, ವಾಸ್ತುಹೋಮ, ಸುದರ್ಶನ ಹೋಮ, ವಾಸ್ತುಬಲಿ ನಡೆಯಿತು. ಬುಧವಾರ ಬೆಳಗ್ಗೆ ಲಕ್ಷ್ಮಿ ಗಣಪತಿ ಹೋಮ, ರುದ್ರಾಭಿಷೇಕ, ಶತರುದ್ರಾಭಿಷೇಕ, ರುದ್ರಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆಯಿತು. ಪೌಳಿ ಉದ್ಘಾಟನೆಯ ಬಳಿಕ ತುಲಾಭಾರ ಸೇವೆ, ಮಹಾಮಂಗಳಾರತಿ, ದೇವರ ನೃತ್ಯ ಬಲಿ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಾಜಿ ಸಂಸದ ಸಿ.ಎಸ್ ಪುಟ್ಟರಾಜು, ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಬೊಳದಂಡ ಲಲಿತಾ ನಂದಕುಮಾರ್, ಪರದಂಡ ಸುಬ್ರಮಣಿ ಕಾವೇರಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಡಾ. ಸಣ್ಣುವಂಡ ಕಾವೇರಪ್ಪ , ಪಾಂಡಂಡ ನರೇಶ್ ಕಲ್ಯಾಟಂಡ ಮುತ್ತಪ್ಪ, ಬಾಚಮಂಡ ಪೂವಣ್ಣ, ಲವ ಚಿಣ್ಣಪ್ಪ, ನಂಬಡಮಂಡ ಸುಬ್ರಮಣಿ, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಕಂದಾಯ ಪರಿವೀಕ್ಷಕ ರವಿಕುಮಾರ್, ತಕ್ಕ ಮುಖ್ಯಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು ಹಾಜರಿದ್ದರು.
ದೇವಾಲಯದ ಮುಖ್ಯ ಅರ್ಚಕ ಕುಶ ಭಟ್, ಜಗದೀಶ್, ಶ್ರೀಕಾಂತ್ ಪೂಜಾ ಕೈಂಕರ್ಯ ನೆರವೇರಿಸಿದರು.