ಚಾಮರಾಜನಗರ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಿಸಿ ಇದರಿಂದ ಬಂದ ಆದಾಯವನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಕಟ್ಟಡ ಮತ್ತು ಇತರ ಕಾರ್ಮಿಕ ಕಲ್ಯಾಣ ಮಂಡಳಿ, ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಉದ್ಘಾಟನೆ, ಎಲ್ಲ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಸ್ತೆ ಬೈಕ್ ಅಪಘಾತದಲ್ಲಿ ಯುವಕರು ಮೃತಪಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಪರಿಶೀಲನೆ ಮಾಡಬೇಕು. ಹೊರಗುತ್ತಿಗೆ ನೌಕರರ ಸೊಸೈಟಿ ಸ್ಥಾಪನೆಯಲ್ಲಿ ಬೀದರ್ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿದೆ. ಖಾಸಗಿ ಏಜೆನ್ಸಿಗಳನ್ನು ಹೊರಗಿಡುವ ಉದ್ದೇಶದಿಂದ ಚಾಮರಾಜನಗರ ಜಿಲ್ಲೆಯಲ್ಲೂ ಹೊರಗುತ್ತಿಗೆ ನೌಕರರನ್ನು ಸೊಸೈಟಿಗೆ ನೋಂದಣಿ ಮಾಡಿಸಿ ಎಂದು ಹೇಳಿದರು.
ಸ್ಮಾರ್ಟ್ ಕಾರ್ಡ್: ದೇಶದಲ್ಲಿ ಅಸಂಘಟಿತ ಕಾರ್ಮಿಕರು ಶೇ.90ರಷ್ಟು ವರ್ಗದಲ್ಲಿದ್ದಾರೆ. ರಾಜ್ಯದಲ್ಲಿ ಶೇ.85ರಷ್ಟು ಅಸಂಘಟಿತ ಕಾರ್ಮಿಕರು ಇದ್ದಾರೆ. ಇವರಿಗೆಲ್ಲ ಸ್ಮಾರ್ಟ್ ಕಾರ್ಡ್ ನೀಡುತ್ತಿದ್ದೇವೆ. ಡೀಸೆಲ್ ಮತ್ತು ಪೆಟ್ರೋಲ್ ಸೆಲ್ ಕೊಟ್ಟರೆ ಅಸಂಘಟಿತ ಕಾರ್ಮಿಕರಿಗೆ ಕೊಟ್ಟರೆ ಅನುಕೂಲವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ ಎಂದು ಲಾಡ್ ತಿಳಿಸಿದರು.
ದೇಶದ ಇತಿಹಾಸದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ವಾರ್ಷಿಕವಾಗಿ 3 ಲಕ್ಷ ಕೋಟಿ ರೂ. ಕೊಡುತ್ತಿರುವ ಸರ್ಕಾರ ಕಾಂಗ್ರೆಸ್. ಆದರೆ, ಕೇಂದ್ರದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಉದ್ದಿಮೆದಾರರ 15 ಲಕ್ಷ ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಲ್ಲಿ 10 ಕೋಟಿಗಳೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ರಾಜ್ಯದಲ್ಲಿ 500 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಎಲ್ಲ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಿದ್ದಾರೆ. ಇದಕ್ಕೆ ಕಾರಣರಾಗಿರುವ ಸಿದ್ದರಾಮಯ್ಯ ಅವರಿಗೆ ಜನರ ಆಶೀರ್ವಾದ ಇರಲಿ ಎಂದರು.
ಸ್ಥಳೀಯರಿಗೆ ಉದ್ಯೋಗ ನೀಡಿ
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕೈಗಾರಿಕೆ ಇದ್ದರಷ್ಟೇ ಕಾರ್ಮಿಕರಿಗೆ ಉದ್ಯೋಗ ನೀಡಲು ಸಾಧ್ಯ. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ರಮುಖವಾಗಿ 8 ದೊಡ್ಡ ಕೈಗಾರಿಕೆಗಳು ಮತ್ತು 40-50 ಮಧ್ಯಮ ಕೈಗಾರಿಕೆಗಳಿವೆ. ಇಲ್ಲಿ ಸುಮಾರು 10 ಸಾವಿರ ಕಾರ್ಮಿಕರು ದುಡಿಯುತ್ತಿದ್ದಾರೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಕೈಗಾರಿಕೆಗಳ ಮಾಲೀಕರ ಸಭೆ ಕರೆದು ಸ್ಥಳೀಯರಿಗೆ ಉದ್ಯೋಗ ನೀಡಲು ಸೂಚನೆ ನೀಡಬೇಕು. ನಮ್ಮ ಭಾಗದಲ್ಲಿ ಹೆಚ್ಚು ಕಾರ್ಮಿಕರು ಇದ್ದಾರೆ. ಮೈಸೂರು ಭಾಗಕ್ಕೆ ಕೂಲಿಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕಾರ್ಮಿಕರು ಮನವಿ ಮಾಡಿರುವಂತೆ ಮೈಸೂರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯ ಮಾಡಿದರು.
11 ವರ್ಷಗಳ ಹಿಂದೆ ಕೈಗಾರಿಕಾ ಪ್ರದೇಶ ಸ್ಥಾಪನೆಯಾಯಿತು. ಶಿಕ್ಷಣದ ತಕ್ಕಂತೆ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಉದ್ದೇಶದಿಂದ ಕೈಗಾರಿಕಾ ಪ್ರದೇಶ ಗುಂಡ್ಲುಪೇಟೆಯಲ್ಲೇ ಮಾಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಆದರೆ ನಾನು ಚಾಮರಾಜನಗರದಲ್ಲಿ ಸರ್ವೇ ಮಾಡಿಸಿ ಸರ್ಕಾರಿ ಭೂಮಿ ಲಭ್ಯತೆ ತಿಳಿದು ಚಾಮರಾಜನಗರದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅಡಿಗಲ್ಲು ಹಾಕಲು ಕ್ರಮ ವಹಿಸಿದ್ದೆ. ಪ್ರಸ್ತುತ ಈ ಪ್ರದೇಶ ಅಭಿವೃದ್ಧಿಯತ್ತ ಸಾಗಿದೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾದ ಎಚ್.ಜಿ.ರಮೇಶ್, ಕೆ.ಪಿ.ಜಾನಿ, ಬಸಪ್ಪ, ಕುಮಾರ್ ಜೈನ್, ವಿಜಯ್‌ಕುಮಾರ್ ಎಸ್ ಪಾಟೀಲ್, ಲಿಡ್‌ಕರ್ ಸಂಸ್ಥೆ ಅಧ್ಯಕ್ಷ ನಾಗರಾಜ ಮುಂಡರಗಿ, ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಕಾರ್ಮಿಕ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಕಾರ್ಯದರ್ಶಿ ಡಿ.ಭಾರತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಇದ್ದರು.
ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದಾರೆ ಅಸಂಘಟಿತ ಕಾರ್ಮಿಕರನ್ನು ಸಂಘಟಿತರನ್ನಾಗಿ ಮಾಡುವ ಸದುದ್ದೇಶದಿಂದ ಸಚಿವ ಸಂತೋಷ್ ಲಾಡ್ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ಅಪರ ಕಾರ್ಮಿಕ ಆಯುಕ್ತ ಡಾ.ಎಸ್.ಬಿ.ರವಿಕುಮಾರ್ ಹೇಳಿದರು. ಮಂಡಳಿಯ ಸೌಲಭ್ಯಗಳು ಅರ್ಹರಿಗೆ ಮಾತ್ರ ತಲುಪಬೇಕೆಂಬ ಉದ್ದೇಶದಿಂದ ನಕಲಿ ಕಾರ್ಡ್‌ಗಳನ್ನು ರದ್ದು ಮಾಡಿದ್ದಾರೆ. ಪ್ರಾರಂಭದಲ್ಲಿ 53 ಲಕ್ಷ ಇದ್ದ ಕಾರ್ಡ್‌ಗಳು ಈಗ 33 ಲಕ್ಷಕ್ಕೆ ಇಳಿದಿವೆ. ರಾಜ್ಯಾದ್ಯಂತ ಸಂಚಾರ ಚಿಕಿತ್ಸಾ ಸೌಲಭ್ಯ ನೀಡಲಾಗಿದೆ. ಮುರಾರ್ಜಿ ದೇಸಾಯಿ ಶಾಲೆ ಮಾದರಿಯಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಶಾಲೆ ಆರಂಭಿಸುವ ಚಿಂತನೆ ಹೊಂದಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಸಮಾಜಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತು ಯೋಜನೆ ಜಾರಿಗೆ ತಂದಿದ್ದಾರೆ. ಒಟ್ಟು 91 ಬಗೆಯ ವೃತ್ತಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಎಸ್ಸಿ,ಎಸ್ಟಿ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಗೆ ಆಶಾ ದೀಪ ಯೋಜನೆ ಜಾರಿಗೆ ತಂದಿದ್ದಾರೆ ಎಂದು ವಿವರಿಸಿದರು. ಸಮುಚ್ಚಯ ಉದ್ಘಾಟನೆ: ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸಮುಚ್ಚಯವನ್ನು ಕಾರ್ಮಿಕ ಸಚಿವ ಸಂತೋಷ್‌ಲಾಡ್ ಉದ್ಘಾಟನೆ ಮಾಡಿದರು. 300ಕ್ಕೂ ಹೆಚ್ಚು ಕೊಠಡಿಗಳು ಇರುವ ಈ ಸಮುಚ್ಚಯವನ್ನು ಕಾರ್ಮಿಕರು ತಾತ್ಕಾಲಿಕ ಬಳಕೆಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಚೆಕ್, ಸ್ಮಾರ್ಟ್ ಕಾರ್ಡ್ ವಿತರಣೆ: ಇದೇ ವೇಳೆ ಅಪಘಾತದ ಪರಿಹಾರ ಚೆಕ್, ಆಶಾ ದೀಪ ಯೋಜನೆ ಚೆಕ್, ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಸಾಂಕೇತಿಕವಾಗಿ ಸಚಿವ ಸಂತೋಷ್ ಲಾಡ್ ವಿತರಣೆ ಮಾಡಿದರು. ಕಾರ್ಮಿಕ ಇಲಾಖೆ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಸಚಿವರಿಗೆ ಸನ್ಮಾನಿಸಿದರು.
ರಾಜ್ಯದಲ್ಲಿ ಬದಲಾವಣೆಯ ಅಲೆ ಬೀಸುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಕಾಂಗ್ರೆಸ್ ಸರ್ಕಾರ ಒಳ್ಳೆಯ ಯೋಜನೆಗಳನ್ನು ತಂದಿದೆ. ದೂರದೃಷ್ಟಿಯ ನಾಯಕತ್ವ ಹೊಂದಿರುವ ಸಚಿವ ಸಂತೋಷ್‌ಲಾಡ್ ಯುವಜನರ ಶ್ರೇಯೋಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆಶಿ ನೇತೃತ್ವದಲ್ಲಿ ಸಂತೋಷ್ ಲಾಡ್ ಕೆಲಸಗಳು ಮಾತನಾಡುತ್ತಿವೆ. ಕಾರ್ಮಿಕರ ಮಕ್ಕಳ ಏಳಿಗೆಗಾಗಿ ಶಾಲೆ ಆರಂಭಿಸುತ್ತಿದ್ದಾರೆ. ಎಚ್.ಎಂ.ಗಣೇಶ್‌ಪ್ರಸಾದ್ ಗುಂಡ್ಲುಪೇಟೆ ಶಾಸಕ