ದೊಡ್ಡಬಳ್ಳಾಪುರ: ಪೆಟ್ರೋಲ್, ಡಿಸೇಲ್ ಹಾಗೂ ದಿನಪಯೋಗಿ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿತು.
ಕರವೇ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾ, ಕರೊನಾ ಪಿಡುಗು ಮಧ್ಯಮ ವರ್ಗದವರ ಪಾಲಿಗೆ ಸಹಿಸಲಾರದ ಹೊಡೆತ ಕೊಟ್ಟಿದೆ. ಹಲವು ಕಂಪನಿಗಳು ಬಾಗಿಲು ಮುಚ್ಚಿದ್ದು ಕಾರ್ಮಿಕರು ನಿರುದ್ಯೊಗಿಗಳಾಗಿದ್ದಾರೆ. ವ್ಯಾಪಾರ ವಹಿವಾಟು ನೆಲ ಕಚ್ಚಿವೆ. ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಉದ್ದಿಮೆದಾರರು, ದಿನಗೂಲಿ ಕಾರ್ಮಿಕರ ಬದುಕು ತೀರಾ ಹದಗೆಟ್ಟಿದೆ. ಹೀಗಿದ್ದೂ ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಸಂಕಷ್ಟ ಪರಿಗಣಿಸದೆ ದಿನಂಪ್ರತಿ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆಅನಿಲ ಬೆಲೆಯನ್ನು ಏರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ ಮಾತನಾಡಿ, ಶೀಘ್ರವೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಜನರಿಗೆ ಹೊರೆಯಾಗುತ್ತಿರುವ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಕನಿಷ್ಠಪಕ್ಷ ದಿನಪಯೋಗಿ ವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನಾ ಹಳೇ ಬಸ್ ನಿಲ್ದಾಣದಿಂದ ಬೈಕ್‌ಗಳನ್ನು ತಳ್ಳಿಕೊಂಡು, ಗ್ಯಾಸ್ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತು ತಾಲೂಕು ಕಚೇರಿವರೆಗೆ ಮೆರವಣೆಗೆ ಮಾಡಲಾಯಿತು. ಬಳಿಕ ತಹಸೀಲ್ದಾರ್ ಟಿ.ಎಸ್. ಶಿವರಾಜು ಅವರಿಗೆ ಮನವಿ ಸಲ್ಲಿಸಲಾಯಿತು.