ಜಿಲ್ಲೆ

ಇಂಧನ ದರ ಏರಿಕೆ ಖಂಡಿಸಿ ಇಂದಿನಿಂದ ಪ್ರತಿಭಟನೆ:ಬಿ.ವೈ. ವಿಜಯೇಂದ್ರ

ಹಾಸನ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಜತೆಗೆ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಮೇಲೆ ಬರೆ ಎಳೆಯಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರದಿಂದ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಿ ನಂತರ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ರಿಂಗ್ ರಸ್ತೆ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷ ಹತಾಷವಾಗಿದೆ. ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಯಾರೂ ಕೂಡ ಊಹಿಸದ ರೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಬರಗಾಲದ ಬೇಗೆಯಿಂದ ಇನ್ನೂ ಹೊರ ಬರಲು ಸಾಧ್ಯವಾಗದ ಜನರ ಮೇಲೆ ಇದೀಗ ಪೆಟ್ರೋಲ್, ಡೀಸೆಲ್ ದರ ಹೆಚ್ಚು ಮಾಡುವ ಮೂಲಕ ಜನರ ಮೇಲೆ ಬರೆ ಹಾಕುವ ಕೆಲಸ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂಧನ ದರ ಏರಿಕೆಯಿಂದ ಸಾಗಣೆ ವೆಚ್ಚ ಜಾಸ್ತಿ ಆಗಲಿದೆ. ತರಕಾರಿ ಬೆಲೆ ಜಾಸ್ತಿ ಆಗುತ್ತದೆ. ರೈತರಿಗೂ ಅನಾನುಕೂಲ ಆಗಲಿದೆ. ಟ್ರ್ಯಾಕ್ಟರ್ ಬಳಕೆದಾರರಿಗೆ ಹೊರೆಯಾಗಲಿದೆ. ಬೆಲೆ ಏರಿಕೆಯಿಂದ ಪ್ರತಿಯೊಬ್ಬರಿಗೂ ಹೊರೆ ಆಗುತ್ತದೆ. ರಾಜ್ಯ ಸರ್ಕಾರ ಇಷ್ಟೊಂದು ಬೇಜವಾಬ್ದಾರಿತನದಿಂದ ನಡೆದುಕೊಳ್ಳಬಾರದು. ಈ ನಡೆಯನ್ನು ಖಂಡಿಸಲು ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಜೂನ್ 17ರಂದು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸಾದ್ಯವಾಗದೆ ಇಂತಹ ತೀರ್ಮಾನ ಮಾಡಿದರೆ ಎಲ್ಲ ವರ್ಗದ ಜನರಿಗೆ ಅನಾನುಕೂಲ ಆಗಲಿದೆ. ಈಗಲೂ ಕಾಲ ಮಿಂಚಿಲ್ಲ. ಪೆಟ್ರೋಲ್ ಮೇಲೆ 3 ರೂ., ಡೀಸಲ್ ಮೇಲೆ 3.5 ರೂ. ಜಾಸ್ತಿ ಮಾಡಿದಿರಿ ಕೂಡಲೇ ಅದನ್ನು ಹಿಂಪಡೆಯಿರಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡುತ್ತೇವೆ. ಕಳೆದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಯಾವುದೆ ಹೊಸ ಯೋಜನೆ ಕೊಡಲು ಸಾಧ್ಯವಾಗಿಲ್ಲ. ಗ್ಯಾರಂಟಿ ಗ್ಯಾರಂಟಿ ಎಂದು ಹೇಳಿಕೊಂಡು ಹಣ ಹೊಂದಿಸಲು ಆಗುತ್ತಿಲ್ಲ. ಒಂದು ಕಡೆ ಯಥೇಚ್ಛವಾಗಿ 70 ರಿಂದ 80 ಸಾವಿರ ಕೋಟಿ ರೂ. ಸಾಲ ಮಾಡಿ ರಾಜ್ಯದ ಜನರಿಗೆ ಹೊರೆ ಹಾಕುತ್ತಿದ್ದಾರೆ ಎಂದು ದೂರಿದರು.
ಇದೆ ವೇಳೆ ಶಾಸಕ ಹೆಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಹೆಚ್.ಎನ್. ನಾಗೇಶ್, ಪ್ರೀತಿವರ್ಧನ್, ಬಿ.ಹೆಚ್. ನಾರಾಯಣಗೌಡ ಇತರರು ಉಪಸ್ಥಿತರಿದ್ದರು.