ದೊಡ್ಡಬಳ್ಳಾಪುರ: ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ದಕ್ಷಿಣ ವಲಯ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ ಸಹಯೋಗದಲ್ಲಿ ಆರೋಗ್ಯ, ಪರಿಸರ ಮತ್ತು ಇಂಧನ ಉಳಿತಾಯಕ್ಕಾಗಿ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ವಾಕಥಾನ್ ಆಯೋಜಿಸಲಾಗಿತ್ತು.
ಭಗತ್‌ಸಿಂಗ್ ಕ್ರೆಡಾಂಗಣದಿಂದ ಆರಂಭವಾದ ವಾಕಥಾನ್‌ನಲ್ಲಿ ವಿವಿಧ ಸ್ವಯಂಸೇವಾ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ಗೇಲ್ ಸಿಬ್ಬಂದಿ ಭಾಗವಹಿಸಿ 4 ಕಿಮೀ ಕ್ರಮಿಸಿ, ಪರಿಸರ ಹಾಗೂ ಇಂಧನ ಇಳಿತಾಯದ ಜಾಗೃತಿ ಮೂಡಿಸಿದರು.
ಡಿವೈಎಸ್‌ಪಿ ಟಿ.ರಂಗಪ್ಪ ಮಾತನಾಡಿ, ಇಂಧನದ ಮಿತಿಮೀರಿದ ಬಳಕೆಯಿಂದಾಗಿ ಇಂದು ಪರಿಸರ ಹಾಳಾಗುತ್ತಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಇಂಧನ ಉಳಿತಾಯವನ್ನು ನೀವು ಅನುಸರಿಸಿ, ಇತರರನ್ನು ಪ್ರೇರೇಪಿಸುವಂತೆ ಕರೆ ನೀಡಿದರು.
ಗೇಲ್ ದಕ್ಷಿಣ ವಲಯ ಕಾರ್ಯಾಧಿಕಾರಿ ನಿರ್ದೇಶಕ ಮುರುಗೇಷನ್ ಮಾತನಾಡಿ, ಸರ್ಕಾರ ಇಂಧನ ಆಮದಿಗಾಗಿಯೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಇದನ್ನು ತಡೆಯುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ದೇಶದ ವಿವಿಧೆಡೆಗಳಲ್ಲಿ ತೈಲ ಕಂಪನಿಗಳು ಸೈಕಲ್ ಜಾಥಾ, ಮ್ಯಾರಥಾನ್ ನಡೆಸುತ್ತಿವೆ. ಆರೋಗ್ಯ, ಪರಿಸರ ಮತ್ತು ಇಂಧನ ಉಳಿತಾಯಕ್ಕಾಗಿ ಹಲವಾರು ಜಾಗೃತಿ ಕಾರ‌್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಾಕಥಾನ್ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ‌್ಯಕ್ರಮಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ, ವಿವಿಧ ಪೆಟ್ರೋಲಿಯಂ ಕಂಪನಿಗಳು ಸಹಕಾರ ನೀಡಿವೆ ಎಂದರು. ಗೇಲ್ ಮಹಾಪ್ರಬಂಧಕ ವಿ.ಶ್ರೀನಿವಾಸಲು, ಉಪಮಹಾಪ್ರಬಂಧಕರಾದ ಜೋಶ್ ಥಾಮಸ್, ರಾಜಗೋಪಾಲನ್, ದೂರದರ್ಶನ ನಿರೂಪಕಿ ಸವಿ ಪ್ರಕಾಶ್ ಮತ್ತಿತರರಿದ್ದರು.