ಜಿಲ್ಲೆ

ಇಂದ್ರಧನುಷ್ ಅಭಿಯಾನ 5.0 ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಿರ್ದೇಶನ

ಮೈಸೂರು: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ನೀಡುವ ಮೂಲಕ ‘ಇಂದ್ರಧನುಷ್ ಅಭಿಯಾನ 5.0’ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ನಿರ್ದೇಶನ ನೀಡಿದರು.
ರಾಷ್ಟ್ರೀಯ ಸಾರ್ವತ್ರಿಕ ಲಸಿಕೆ ನೀಡುವ ಇಂದ್ರಧನುಷ್ ಅಭಿಯಾನ 5.0 ಕಾರ್ಯಕ್ರಮ ಅನುಷ್ಠಾನ ಸಂಬಂಧ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಾದ್ಯಂತ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದ 5 ವರ್ಷದೊಳಗಿನ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರಿಗೆ ಬಿಟ್ಟುಹೋದ ಲಸಿಕೆಗಳನ್ನು ಪೂರ್ಣಗೊಳಿಸಲು ಸರ್ಕಾರ ನಿರ್ದೇಶನ ನೀಡಿದೆ. ಆದ್ದರಿಂದ ಇಂದ್ರಧನುಷ್ ಅಭಿಯಾನ 5.0 ತ್ವರಿತವಾಗಿ ಕಾರ್ಯಗತಗೊಳಿಸಬೇಕು ಎಂದು ಸೂಚಿಸಿದರು.
2023ರ ಅಂತ್ಯದೊಳಗೆ ದಡಾರ ಮತ್ತು ರುಬೆಲ್ಲಾ ರೋಗಗಳ ನಿರ್ಮೂಲನೆ ಗುರಿ ಇಟ್ಟುಕೊಂಡಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಈ ರೋಗಗಳ ವಿರುದ್ಧ ಹಾಗೂ ಪಿಸಿವಿ 3ನೇ ಡೋಸ್ ಲಸಿಕಾ ಪ್ರಕ್ರಿಯೆಯ ವೇಗ ಹೆಚ್ಚಿಸಲು ಅಭಿಯಾನ ನಡೆಸಬೇಕು ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ 3 ಸುತ್ತುಗಳಲ್ಲಿ ಅಭಿಯಾನ ನಡೆಯಲಿದೆ. ಆ.7ರಿಂದ 12ರವರೆಗೆ, ಸೆಪ್ಟೆಂಬರ್ 11ರಿಂದ 16ರವರೆಗೆ ಮತ್ತು ಅಕ್ಟೋಬರ್ 9ರಿಂದ 14ರವರೆಗೆ ತಲಾ ಆರು ದಿನಗಳು ಲಸಿಕಾ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇಂದ್ರಧನುಷ್ 5.0 ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಹಳ್ಳಿಗಳು, ಕೊಳಚೆ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಲಸಿಕೆ ಪಡೆಯುವವರನ್ನು ಗುರುತಿಸುವ ಕೆಲಸ ಮಾಡಬೇಕು. ಲಸಿಕೆ ನೀಡುವಾಗ ಮಕ್ಕಳ ಆರೋಗ್ಯ ಪರಿಸ್ಥಿತಿ ಪರೀಕ್ಷಿಸಬೇಕು. ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಆಶಾ ಕಾರ್ಯಕರ್ತೆಯರ ಯಾವುದೇ ಹುದ್ದೆಗಳು ಖಾಲಿ ಇರಬಾರದು. ಲಸಿಕೆ ಪಡೆಯಲು ಅರ್ಹರಾದವರನ್ನು ಗುರುತಿಸಿ ಲಸಿಕೆ ಪಡೆಯುವಂತೆ ಅರಿವು ಮೂಡಿಸಬೇಕು. ಈ ಕುರಿತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಡೆಂೆ ಬಗ್ಗೆ ಜಾಗೃತಿ ವಹಿಸಿ:
ಮಳೆಗಾಲ ಪ್ರಾರಂಭವಾಗಿದ್ದು, ಡೆಂೆ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಸೊಳ್ಳೆಗಳ ಕಡಿತದಿಂದ ಡೆಂೆ ಕಂಡು ಬರುವುದರಿಂದ ಮನೆ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು. ಹಳೆಯ ಟೈರ್‌ಗಳು, ತೆಂಗಿನ ಚಿಪ್ಪುಗಳು, ಒಡೆದ ಮಡಕೆಗಳು, ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ತೊಟ್ಟಿ ಹಾಗೂ ಟ್ಯಾಂಕ್‌ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು. ಜ್ವರ ಬಂದರೆ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಜಾಗೃತಿ ಮೂಡಿಸಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳ ಸಹಕಾರ ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ, ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. 0- 5 ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲಾಗುತ್ತದೆ. ಫಲಾನುಭವಿಗಳು ಠಿಠಿ://್ಠಡಿಜ್ಞಿಛ್ಝ್ಛ್ಟಿಛಿಜಜಿಠ್ಟಿಠಿಜಿಟ್ಞ.ಞಟಜ್ಛಡಿ.ಜಜಿ.ಜ್ಞಿ ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ 0-2 ವರ್ಷದ 5075 ಮಕ್ಕಳು, 2-5 ವರ್ಷದ 432 ಮಕ್ಕಳು ಹಾಗೂ 1211 ಗರ್ಭಿಣಿ ಮಹಿಳೆಯರನ್ನು ಲಸಿಕೆ ಬಿಟ್ಟು ಹೋಗಿರುವವರು ಎಂದು ಗುರುತಿಸಲಾಗಿದೆ. ಇವರಿಗೆ ಲಸಿಕೆ ನೀಡಲು ಜಿಲ್ಲೆಯಲ್ಲಿ 900 ವಿಶೇಷ ಲಸಿಕಾ ಕೇಂದ್ರಗಳ ಮೂಲಕ ರಕ್ಷಣಾತ್ಮಕ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ನಗರ ಪಾಲಿಕೆಯ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.