ಕಲಬುರಗಿ: ಭಕ್ತರ ಇಷ್ಟಾರ್ಥ ಈಡೇರಿಸುವ ಜತೆಗೆ ಭಾವೈಕ್ಯತೆ ಸಂಕೇತವಾಗಿರುವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಜಾತ್ರೆ ಸಂಭ್ರಮ ಸೂರ್ಯನಗರಿ ಕಲಬುರಗಿ ಸೇರಿ ಎಲ್ಲೆಡೆ ಮನೆ ಮಾಡಿದ್ದು, ಗುರುವಾರ ಸಂಜೆ ಶರಣಬಸವೇಶ್ವರ ಮಂದಿರದ ಆವರಣದಲ್ಲಿ ಉಚ್ಛಾಯಿ ಶ್ರದ್ದಾಭಕ್ತಿಯಿಂದ ನಡೆಯಿತು. ಶುಕ್ರವಾರ ಸಂಜೆ 6ಕ್ಕೆ ರಥೋತ್ಸವ ನಡೆಯಲಿದೆ.
ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ ಅವರು, ಶರಣಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಚ್ಚಾಯಿಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಪುರವಂತರ ಪುರವಂತಿಕೆ ಪ್ರದರ್ಶನ, ಶರಣಬಸವೇಶ್ವರ ಮಹಾರಾಜ ಕೀ ಜೈ ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆ ಭಕ್ತಿ ಪರಾಕಾಷ್ಠೆ ತಲುಪಿದ ಭಕ್ತರು ಉಚ್ಚಾಯಿ ಎಳೆದು ಶರಣರ ಆಶೀರ್ವಾವಾದಕ್ಕೆ ಪಾತ್ರರಾದರು.
ಲಿಂಗರಾಜ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ನ್ಯಾ. ಶಿವರಾಜ ಪಾಟೀಲ್ ಇತರರು ಉಚ್ಚಾಯಿಗೆ ಪೂಜೆ ಸಲ್ಲಿಸುವಾಗ ಇದ್ದರು.
ಮಹಾದಾಸೋಹ ಯಾತ್ರೆ ಶುಕ್ರವಾರ ಸಂಜೆ 6ಕ್ಕೆ ನಡೆಯಲಿದ್ದು, ಶರಣರ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ರಥವನ್ನು ಅಲಂಕಾರಗೊಳಿಸುವುದು ಇನ್ನಿತರ ಸಿದ್ಧತೆಗಳು ಭರದಿಂದ ನಡೆದಿವೆ. ಜಾತ್ರಾ ಮೈದಾನದಲ್ಲಿ ಬೆಂಡು ಬತಾಸು, ತಿಂಡಿ ತಿನಿಸುಗಳ ಮಳಿಗೆ, ಮನರಂಜನೆ, ಸಾಹಸಮಯ ಆಟದ ಮಳಿಗೆ ತಲೆ ಎತ್ತಿವೆ.
ಶರಣನ ರಥ ಸಂಭ್ರಮ ನೋಡಲು ನಾಡಿನ ವಿವಿಧೆಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಕಲಬುರಗಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಾತ್ರೆಯಲ್ಲಿ ದೇಶದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ.
ಅನ್ನ ದಾಸೋಹ: ಕಲಬುರಗಿ : ಜಾತ್ರೆ ನಿಮಿತ್ತ ನಗರದ ರಾಜಾಪುರದ ಶಹಾಬಾದ್ ಕ್ರಾಸ್ನಲ್ಲಿ ಶುಕ್ರವಾರ ಭಕ್ತರಿಗಾಗಿ ಟಿಪ್ಪರ್ ಮತ್ತು ಲಾರಿ ಮಾಲೀಕರ ಸಂಘದಿಂದ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಅನ್ನ ದಾಸೋಹ ಏರ್ಪಡಿಸಲಾಗಿದೆ ಎಂದು ಜಗದೇವಪ್ಪ ಪಾಟೀಲ್ ಮತ್ತು ಶಿವಶರಣಪ್ಪ ಎಸ್ ತಿಳಿಸಿದ್ದಾರೆ.
ಎಸ್.ಬಿ.ಪಾಟೀಲ್ ಪರಿವಾರದಿಂದ ದಾಸೋಹ
ಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ದಿ.ಅಮಿತ್ ಬಿ.ಪಾಟೀಲ್ ಸ್ಮರಣಾರ್ಥ ಎಸ್.ಬಿ.ಪಾಟೀಲ್ ಪರಿವಾರದಿಂದ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಶುಕ್ರವಾರ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದಾರೆ. ಕಲ್ಯಾಣಿ ಪೆಟ್ರೋಲ್ ಪಂಪ್ ಬಳಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಬೃಹತ್ ಪೆಂಡಾಲ್ ಹಾಕಿ ಊಟದ ವ್ಯವಸ್ಥೆ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ 11ರಿಂದ ರಾತ್ರಿ 10ರವರೆಗೆ ದಾಸೋಹ ನಡೆಯಲಿದೆ.