ಜಿಲ್ಲೆ

ಇಂದು ರಾಜ್ಯ ಸಮಿತಿ ಸಭೆ

ಚಿತ್ರದುರ್ಗ: ಹೊಸ ಆಯಾಮದೊಂದಿಗೆ ರೈತ ಚಳವಳಿ ಮುನ್ನಡೆಸುವ ಉದ್ದೇಶದಿಂದ ಅ.26ರಂದು ಮಧ್ಯಾಹ್ನ 12 ಗಂಟೆಗೆ ನಗರದ ತರಾಸು ರಂಗಮಂದಿರದಲ್ಲಿ ರೈತ ಸಂಘದ ರಾಜ್ಯ ಸಮಿತಿ ಸಭೆ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಸಂಘಟನಾ ಕಾರ‌್ಯದರ್ಶಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತಿತರ ಪ್ರ ಮುಖರು ಪಾಲ್ಗೊಳ್ಳಲಿದ್ದಾರೆ. ದೇಶದ ಆಡಳಿತ, ರೈತ, ದುಡಿಯುವ ಜನರ, ಮಹಿಳೆಯರು ಮತ್ತು ಯುವಜನರ ವಿರೋಧಿಯಾಗಿದೆ. ರೈತರ ಆತ್ಮಹತ್ಯೆ ನಿಂತಿಲ್ಲ. ಅಸಮಾನತೆ ಹೆಚ್ಚುತ್ತಿದೆ. ಭ್ರಷ್ಟಾಚಾರ ವ್ಯಾಪಕವಾಗುತ್ತಿದ್ದು, ರಾಜಕೀಯ ಕ್ಷೇತ್ರ ನೈತಿಕತೆ ಕಳೆದುಕೊಂಡಿದೆ.

ಕೋಮುವಾದಿ ಮತ್ತು ಬಂಡವಾಳಶಾಹಿಗಳು ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿ ದೇಶವನ್ನು ಕೊಂಡೊಯ್ಯುತ್ತಿವೆ. ಇಂತಹ ಸಂಕಷ್ಟ ಮತ್ತು ಸಂಕ್ರಮಣ ಸ್ಥಿತಿಯಲ್ಲಿ ರೈತ ಚಳವಳಿ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯ ಗಳನ್ನು ಘೋಷಿಸಲಾಗುವುದು. ರಾಜ್ಯ ಸಮಿತಿಯನ್ನು ಮರು ರಚಿಸಲಾಗುವುದು ಎಂದು ನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-----