ಕಲಬುರಗಿ: ಜಿಲ್ಲೆಯಲ್ಲಿ ಶುಕ್ರವಾರವೂ ಕರೊನಾ ಅಬ್ಬರಿಸಿದ್ದು, 89 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಸೋಂಕಿತರ ಸಂಖ್ಯೆ 2592ಕ್ಕೆ ತಲುಪಿದೆ. 42 ಜನ ಚೇತರಿಸಿಕೊಂಡಿದ್ದೂ ಸೇರಿ ಒಟ್ಟು ಬಿಡುಗಡೆಯಾದವರ ಸಂಖ್ಯೆ 1567 ಆಗಿದೆ. 987 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 38 ಸೋಂಕಿತರು ಮೃತಪಟ್ಟಿದ್ದಾರೆ.
ಇಂದಿನ ಪ್ರಕರಣಗಳಲ್ಲಿ ಐಎಲ್ಐ 36, ಸಾರಿ 3 ಪ್ರಕರಣಗಳಿದ್ದು, 23 ಜನರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 21 ಜನ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ. ಸಾರಿ 3 ಪ್ರಕರಣ, ಅಂತರ ಜಿಲ್ಲಾ ಪ್ರವಾಸ 6, 15 ವರ್ಷದೊಳಗಿನ 8 ಮಕ್ಕಳು, 28 ಮಹಿಳೆಯರಿಗೆ ಸೋಂಕು ತಗುಲಿದೆ. ಐಸಿಯುದಲ್ಲಿ 33 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಪೊಲೀಸ್ ಭವನ ಸೀಲ್ಡೌನ್
ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸರಿಗೆ ಕರೊನಾ ಬೆಂಬಿಡದೆ ಕಾಡುತ್ತಿರುವುದರಿಂದ ಕಲಬುರಗಿಯ ಪೊಲೀಸ್ ಭವನ ಸೀಲ್ಡೌನ್ ಮಾಡಲಾಗಿದೆ. ಈ ಭವನದಲ್ಲಿ ಐಜಿಪಿ, ಎಸ್ಪಿ, ಹೆಚ್ಚುವರಿ ಎಸ್ಪಿ ಕಚೇರಿಯ ಎಸ್ಬಿ ಸೆಕ್ಷನ್, ಡಿಸಿಐಬಿಯಲ್ಲಿ ಕೆಲಸ ಮಾಡುತ್ತಿರುವ ಮತ್ತಷ್ಟು ಸಿಬ್ಬಂದಿ ಮತ್ತು ಐಜಿಪಿ ಕಚೇರಿಯ ಇಬ್ಬರು ಸಿಬ್ಬಂದಿಗೆ ವೈರಸ್ ಅಂಟಿದ್ದರಿಂದ ಸಂಪೂರ್ಣ ಸ್ಯಾನಿಟೈಸ್ ಮಾಡಿ ಕೆಲ ದಿನಗಳ ಮಟ್ಟಿಗೆ ಸೀಲ್ಡೌನ್ ಮಾಡಲಾಗಿದೆ. ಸೋಂಕಿತರ ನೇರ ಸಂಪರ್ಕಕ್ಕೆ ಬಂದವರನ್ನು ಹೋಮ್ ಕ್ವಾರಂಟೈನ್ಗೆ ಸಲಹೆ ನೀಡಿ, ಉಳಿದವರನ್ನು ವಿವಿಧೆಡೆ ಬಂದೋಬಸ್ತ್ ಕೆಲಸಗಳಿಗೆ ನಿಯೋಜನೆ ಮಾಡಲಾಗಿದೆ.
ಅನುಮತಿಸಿದ ಅವಧಿಯಲ್ಲಿ ಚಟುವಟಿಕೆ
ಕರೊನಾ ನಿಯಂತ್ರಣಕ್ಕಾಗಿ ಕಲಬುರಗಿ ನಗರ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ 20ರವರೆಗೆ ಲಾಕ್ಡೌನ್ ಅವಧಿಯಲ್ಲಿ ಅನುಮತಿಸಿದ ಚಟುವಟಿಕೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ. ಈ ಅದೇಶ ಆಸ್ಪತ್ರೆ ಮತ್ತು ಔಷಧ ಅಂಗಡಿಗಳಿಗೆ ಅನ್ವಯಿಸುವುದಿಲ್ಲ.